ಜ್ಞಾನವಿಕಾಸ ಕೇಂದ್ರ ಮಹಿಳೆಯರಿಗೆ ಅನೇಕ ಯೋಜನೆ ಕಲ್ಪಿಸಿದೆ: ಜಯಲಕ್ಷ್ಮಿ

| Published : Feb 21 2024, 02:08 AM IST

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ ರೂಪುಗೊಂಡಿರುವ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯಾಚರಿಸುತ್ತಿರುವ ಮಹಿಳಾ ಜ್ಞಾನವಿಕಾಸ ಕೇಂದ್ರ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ ಎಂದು ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಹೇಳಿದರು.

- ತ್ರಿಪುರಾಂತಕಿ ಜ್ಞಾನವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ ರೂಪುಗೊಂಡಿರುವ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯಾಚರಿಸುತ್ತಿರುವ ಮಹಿಳಾ ಜ್ಞಾನವಿಕಾಸ ಕೇಂದ್ರ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ ಎಂದು ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಹೇಳಿದರು.

ಸೋಮವಾರ ಕೊಪ್ಪ ವಲಯದ ಬೊಮ್ಲಾಪುರ ಕಾರ್ಯಕ್ಷೇತ್ರದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತ್ರಿಪುರಾಂತಕೀ ಜ್ಞಾನವಿಕಾಸ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನವಿಕಾಸ ಕೇಂದ್ರದಿಂದ ಮಹಿಳೆಯರಿಗಾಗಿ ಸ್ವ ಉದ್ಯೋಗ, ಶೈಕ್ಷಣಿಕ ಹಾಗೂ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಮಹಿಳೆಯರ ಪಾಲಿಗೆ ಇದೊಂದು ವಿಶ್ವವಿದ್ಯಾಲಯ ಇದ್ದಂತೆ ಎಂದರು.

ಮೇಲ್ವಿಚಾರಕ ರವಿಕುಮಾರ್‌ರವರು ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ಪ್ರತೀ ತಿಂಗಳ ಕೇಂದ್ರ ಸಭೆ ಹಾಜರಾತಿ ಬಗ್ಗೆ ಮಾಹಿತಿ ನೀಡಿದರು.

ಎನ್.ಆರ್.ಪುರ ತಾಲೂಕಿನಲ್ಲಿ ನಡೆದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರಿಗೆ ಅಭಿನಂದನೆ ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ಮಾತನಾಡಿ ಹೇಮಾವತಿ ವಿ.ಹೆಗ್ಗಡೆಯವರು ಮಹಿಳೆಯರಿಗೆಂದೇ ಅನುಷ್ಠಾನ ಮಾಡಿರುವ ಜ್ಞಾನವಿಕಾಸ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಾಟಲಿಗೆ ನೀರು ತುಂಬುವುದು, ಗೋಣಿ ಚೀಲ ಓಟ ಲೆಮೆನ್ ಅಂಡ್ ಸ್ಪೂನ್, ಮುಂತಾದ ಕ್ರೀಡಾಕೂಟಗಳು ಆಯೋಜನೆಗೊಂಡಿತ್ತು. ಪ್ರಥಮ, ದ್ವಿತೀಯ ಸ್ಥಾನ ಪಡೆದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಮಂಗಳ ಪ್ರಸಾದ್, ಸದಸ್ಯೆ ರೇಖಾ, ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಪ್ರಸಾದ್, ಜ್ಞಾನವಿಕಾಸ ಸಮನ್ವಯಾಧಿಕಾರಿ ರಂಜಿತಾ, ಸೇವಾ ಪ್ರತಿನಿಧಿ ನಾಗಾಂಬಿಕಾ, ಕೇಂದ್ರದ ಸಂಯೋಜಕರು, ಸದಸ್ಯರು ಉಪಸ್ಥಿತರಿದ್ದರು.