ಕನ್ನಡಪ್ರಭ ವಾರ್ತೆ ಮೈಸೂರುಕಠಿಣ ಪರಿಶ್ರಮಕ್ಕೆ ತಕ್ಕ ಅವಕಾಶಗಳು ಸಕಾಲದಲ್ಲಿ ಒದಗಿ ಬಂದರೆ ಯಶಸ್ಸು ಗ್ಯಾರಂಟಿ ಲಭಿಸುತ್ತದೆ. ಯಶಸ್ಸಿಗೆ ಅಡ್ಡದಾರಿ ಅಥವಾ ಸರಳ ದಾರಿಗಳು ಇಲ್ಲ ಎಂದು ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಅಭಿಪ್ರಾಯಪಟ್ಟರು.ನಗರದ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಯುಜಿಸಿ -ನೆಟ್ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಗುರಿ ಮತ್ತು ಕನಸುಗಳ ಬೆನ್ನೇರಿ ಹೊರಡಿ. ಭಯದ ಜಾಗದಲ್ಲಿ ಭರವಸೆಯನ್ನು ಭಿತ್ತಿ, ಯಶಸ್ಸೆಂಬ ಸಂಮೃದ್ಧ ಫಸಲನ್ನು ಪಡೆಯಿರಿ. ಭಯ ನಮ್ಮನ್ನು ಬಂಧಿಸಿದರೆ; ಭರವಸೆ ನಮ್ಮನ್ನು ಬಂಧ ಮುಕ್ತಗೊಳಿಸುತ್ತದೆ ಎಂದರು.ಸಂಶಯವೇ ಮರಣ ಎಂಬ ವಿವೇಕಾನಂದರ ಮಿಂಚಿನ ವಾಣಿ ನಿಮ್ಮ ಕಿವಿಯಲ್ಲಿ ಸದಾ ಗುನುಗುತ್ತಿರಲಿ. ಇಂದಿನ ಯುವಪೀಳಿಗೆ ನಂಬಿಕೆಯಿಟ್ಟು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು. ಆದರೆ ಬಹುತೇಕರು ಅಪನಂಬಿಕೆಗೆ ದಾಸರಾಗಿ ಸರ್ವ ನಾಶದೆಡೆಗೆ ದಾಫುಗಾಲು ಹಾಕುತ್ತಿದ್ದಾರೆ. ಸ್ಪಷ್ಟ ಮತ್ತು ನಿಖರವಾದ ಗುರಿಯಿಟ್ಟು ಬಿಲ್ಲಿನಿಂದ ಹೊರಟ ಬಾಣ ಎಂದೂ ವಿಫಲವಾಗುವುದಿಲ್ಲ. ಆದರೆ ಸಂಶಯವಿಟ್ಟುಕೊಂಡು ಹೊಡಿದ ಬಾಣ ದಿಕ್ಕಾಪಾಲಾಗಿ ಹೋಗುತ್ತದೆ ಎಂದರು.ನಾನು ಮೂಲತಃ ಎಂಜಿನಿಯರಿಂಗ್ವಿದ್ಯಾರ್ಥಿ, ಎಸ್ಐ ಆಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧಿಕಾರಿಯಾದೆ ಎಂದರು.ಕುವೆಂಪು ಮಾತಿನಂತೆ ನಾಳೆ ಎಂದರಾಗದು, ಮುಂದೆ ಎಂದರಾಗದು ಇಂದೆ ನಿರ್ಣಯಿಸಬೇಕೆಂಬ ಮಾತನ್ನು ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿರುವ ನೀವು ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.ವಿಶ್ರಾಂತ ಕುಲಪತಿ ಪ್ರೊ.ಎ. ಬಾಲಸುಬ್ರಮಣ್ಯಂ ಮಾತನಾಡಿ, ಪ್ರಶ್ನೆ ಪತ್ರಿಕೆ ರೂಪಿಸುವ ವಿನ್ಯಾಸ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಸಿಲಬಸ್ಅನ್ನು ಅಮೂಲಾಗ್ರವಾಗಿ ತಿಳಿದುಕೊಳ್ಳಬೇಕು. ಜೊತೆಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಆಗಾಗ್ಗೆ ತಿರುವು ಹಾಕುತಿರಬೇಕು ಎಂದರು.ಕಠಿಣ ಪರಿಶ್ರಮವಿಲ್ಲದೆ ಇಂದಿನ ಪರೀಕ್ಷೆಗಳನ್ನು ಪಾಸು ಮಾಡಲು ಕಷ್ಟ ಎಂದರು. ಹುದ್ದೆಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. ಆದರೆ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಿದೆ. ಪ್ರಶ್ನೆ ಪತ್ರಿಕೆ ತಯಾರಕರು ನಿಮ್ಮನ್ನು ಸ್ಪರ್ಧೆಯಿಂದ ಹೊರ ಹಾಕುವ ಉದ್ದೇಶವಿಟ್ಟುಕೊಂಡು ಪ್ರಶ್ನೆ ಪತ್ರಿಕೆಗಳನ್ನು ರೂಪಿಸುತ್ತಿದ್ದಾರೆ ಎಂದರು.ಖ್ಯಾತ ಶಿಕ್ಷಣ ತಜ್ಞ ಪ್ರೊ.ಎನ್.ಎನ್. ಪ್ರಹ್ಲಾದ್ ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದು ಅವರು ಹೇಳಿದರು.ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಆರ್.ಎನ್. ಪದ್ಮನಾಭ್ಮಾತನಾಡಿ, ನಿದ್ರೆ, ತೂಕಡಿಕೆ, ಭಯ, ಕೋಪ ಮತ್ತು ಅಲಸ್ಯಗಳು ವಿದ್ಯಾರ್ಥಿಗಳ ಪರಮ ಶತ್ರುಗಳು. ಹಾಗೆಯೇ ಶಿಸ್ತು, ಸಂಯಮ, ಸಿದ್ಧತೆ, ಉತ್ಸಾಹ, ಚೈತನ್ಯ ಮತ್ತು ಸ್ಪೂರ್ತಿ ಇವು ವಿದ್ಯಾರ್ಥಿಗಳ ಪರಮ ಮಿತ್ರರು ಎಂದರು.ಹಾಗೆಯೇ ಯಾವುದೇ ಸಾಧನೆ ಮಾಡಲು ನಮಗೆ ಮೊದಲು ಆರೋಗ್ಯ, ಆರಾಮ, ಆಶ್ಚರ್ಯ, ಆನಂದ ಮತ್ತು ಆಯಸ್ಸು ಬೇಕು ಎಂದು ಅವರು ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಪ್ರೊ. ಮಲ್ಲಿಕಾರ್ಜುನಶಾಸ್ತ್ರಿ ಮಾತನಾಡಿ, ಒತ್ತಡ ರಹಿತವಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದರು. ವೇದಿಕೆಯಲ್ಲಿ ಪ್ರೊ.ವಿ. ಜಯಪ್ರಕಾಶ್, ಪ್ರೊ.ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ ಇದ್ದರು.------------------eom/mys/dnm/
ಯಶಸ್ಸಿಗೆ ಕಠಿಣ ಪರಿಶ್ರಮವೇ ದಾರಿ
ಗುರಿ ಮತ್ತು ಕನಸುಗಳ ಬೆನ್ನೇರಿ ಹೊರಡಿ. ಭಯದ ಜಾಗದಲ್ಲಿ ಭರವಸೆಯನ್ನು ಭಿತ್ತಿ, ಯಶಸ್ಸೆಂಬ ಸಂಮೃದ್ಧ ಫಸಲನ್ನು ಪಡೆಯಿರಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.