೯ರಂದು ಉದ್ಯೋಗ ಮೇಳ

| Published : Aug 03 2025, 01:30 AM IST

ಸಾರಾಂಶ

ಚಿಂತಾಮಣಿ ತಾಲೂಕು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣ ಮತ್ತು ಅನುತೀರ್ಣ ಹಾಗೂ ಎಲ್ಲಾ ಪದವೀಧರರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದೇ ಉದ್ಯೋಗ ಮೇಳದ ಉದ್ದೇಶ. ೪೦ಕ್ಕೂ ಹೆಚ್ಚು ಬೃಹತ್ ಹಾಗೂ ಮಧ್ಯಮ ಮತ್ತು ಸಣ್ಣ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಲು ಇದೇ ಆ.9 ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುವುದಾಗಿ ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ನುಡಿದರು.

ನಗರದ ಹೊರವಲಯದ ಜೆ.ಕೆ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣ ಮತ್ತು ಅನುತೀರ್ಣ ಹಾಗೂ ಎಲ್ಲಾ ಪದವೀಧರರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದೇ ಉದ್ಯೋಗ ಮೇಳದ ಉದ್ದೇಶ ಎಂದರು.

40 ಉದ್ಯಮಗಳು ಭಾಗಿ

ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ, ಜಿಗಣಿ, ಬೆಂಗಳೂರು ಗ್ರಾಮಾಂತರ ಪ್ರದೇಶದ ಕೈಗಾರಿಕೆಗಳಾದ ದೇವನಹಳ್ಳಿ, ಹೊಸಕೋಟೆಯ ಚೊಕ್ಕಹಳ್ಳಿ (ಪಿಲ್ಲಗುಂಪೆ) ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ ವೇಮಗಲ್, ನರಸಾಪುರ ಹಾಗೂ ತಾಲೂಕಿನ ಮಸ್ತೇನಹಳ್ಳಿ ಸೇರಿದಂತೆ ೪೦ಕ್ಕೂ ಹೆಚ್ಚು ಬೃಹತ್ ಹಾಗೂ ಮಧ್ಯಮ ಮತ್ತು ಸಣ್ಣ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು ವಿವಿಧ ಪದವಿಗಳನ್ನು ಪಡೆದಂತಹ ವಿದ್ಯಾರ್ಥಿಗಳು ಹಾಗೂ ಪಿಯುಸಿ, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ಹಾಗೂ ಎಲ್ಲಾ ಪದವೀಧರರಾದ ೩೦೦೦ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರೆಯುವ ಅವಕಾಶವಿದೆ ಎಂದು ಅವರು ಹೇಳಿದರು.

ಈಗಾಗಲೇ ಉದ್ಯೋಗ ಮೇಳಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದ್ದು ಆನ್‌ಲೈನ್ ಮೂಲಕ ನೋಂದಣಿ ಹಾಗೂ ಉದ್ಯೋಗ ಮೇಳಕ್ಕೆ ಬರುವವರಿಗೆ ಊಟ, ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಪ್ರತಿಯೊಬ್ಬ ನಿರುದ್ಯೋಗಿ ಮಿತ್ರರು ಭಾಗವಹಿಸಿ ಉದ್ಯೋಗ ಮೇಳದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉದ್ಯೋಗ ಗಿಟ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರೆಡ್ಡಿ, ಉದ್ಯೋಗ ಮೇಳದ ಉಸ್ತುವಾರಿ ಸುರೇಂದ್ರ ರೆಡ್ಡಿ, ನಗರಸಭಾ ದೇವಳಂ ಶಂಕರ್, ಅಗ್ರಹಾರ ಮುರಳಿ, ಮಂಜುನಾಥ್, ಅಲ್ಲಭಕಾಷ್, ಮುಖಂಡರಾದ ವೆಂಕಟೇಶ್, ದೊಡ್ಡಬೊಮ್ಮನಹಳ್ಳಿ ರವಿ, ವೆಂಕಟರಮಣಪ್ಪ, ಮಧು, ಮುನಿವೆಂಕಟರೆಡ್ಡಿ ಮತ್ತಿತರರು ಇದ್ದರು.