ಕನ್ನಡಿಗರಿಗೆ ನೌಕರಿ ಮೀಸಲು ಪ್ರಸ್ತಾಪ

| N/A | Published : Jun 24 2025, 12:32 AM IST / Updated: Jun 24 2025, 10:21 AM IST

Santosh Lad

ಸಾರಾಂಶ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ‘ಮುಂದಿನ ಒಂದು ತಿಂಗಳಲ್ಲಿ   ಸಚಿವ ಸಂಪುಟ ಸಭೆ ಮುಂದೆ ಮಂಡಿಸುತ್ತೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

 ಬೆಂಗಳೂರು :  ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ‘ಮುಂದಿನ ಒಂದು ತಿಂಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತು ಅಭಿಪ್ರಾಯ ಸಂಗ್ರಹ ಪೂರ್ಣಗೊಳಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಮುಂದೆ ಮಂಡಿಸುತ್ತೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು 2024ರ ಜುಲೈನಲ್ಲಿ ಪ್ರತ್ಯೇಕ ವಿಧೇಯಕ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

ಕಳೆದ ವರ್ಷದ ಮಳೆಗಾಲದ ಅಧಿವೇಶನದಲ್ಲಿ ‘ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ ಮಂಡಿಸಲು ಮುಂದಾಗಿತ್ತು. ಈ ವೇಳೆ ರಾಷ್ಟ್ರೀಯ ಮಟ್ಟದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಕೊನೆಯ ಹಂತದಲ್ಲಿ ವಿಧೇಯಕ ತಡೆ ಹಿಡಿಯಲಾಗಿತ್ತು.

ಈ ಬಗ್ಗೆ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಅಂಶಗಳ ಕುರಿತು ಎಲ್ಲಾ ಕಡೆ ಸುತ್ತೋಲೆ ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ.

ಜಿಲ್ಲಾ, ತಾಲೂಕು ಹಂತಕ್ಕೆ ಅಭಿಪ್ರಾಯ ಸಂಗ್ರಹ ಆಗುತ್ತಿದೆ. ಅಭಿಪ್ರಾಯ ಸಂಗ್ರಹ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿಡುತ್ತೇನೆ ಎಂದು ಹೇಳಿದರು.

ಒಂದು ತಿಂಗಳು ಎಂದರೆ ಆಗಸ್ಟ್‌ ವೇಳೆಗೆ ಆಗಬಹುದೇ? ಎಂಬ ಪ್ರಶ್ನೆಗೆ, ಹೈಕೋರ್ಟ್‌ ಗಡುವು ನೀಡಿದಂತೆ ಕರಾರುವಕ್‌ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ. ಆದರೆ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಚರ್ಚಿಸಿ ತೀರ್ಮಾನಿಸುತ್ತೇವೆ ಎಂದಷ್ಟೇ ಹೇಳಿದರು.

ಏನಿದು ಪ್ರಸ್ತಾವನೆ?

ರಾಜ್ಯದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು 2024ರ ಜೂನ್ ತಿಂಗಳಲ್ಲಿ ಸಚಿವ ಸಂಪುಟ ಅನುಮೋದನೆ ಪಡೆಯಲಾಗಿತ್ತು. ಮ್ಯಾನೇಜ್‌ಮೆಂಟ್ ಮೇಲ್ವಿಚಾರಕರು, ವ್ಯವಸ್ಥಾಪಕರು, ತಾಂತ್ರಿಕ, ಆಪರೇಷನಲ್, ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಉದ್ಯೋಗ ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್‌ಮೆಂಟ್ ಕ್ಲರ್ಕ್‌ಗಳು, ಕೌಶಲ್ಯ, ಕೌಶಲ್ಯ ರಹಿತ ಹಾಗೂ ಅರೆ ಕೌಶಲ್ಯ, ಗುತ್ತಿಗೆ ನೌಕರ ಹುದ್ದೆಗಳಲ್ಲಿ ಶೇ.75 ಮೀಸಲು ಸ್ಥಳೀಯರಿಗೆ ನೀಡುವ ವಿಧೇಯಕ ಮಂಡನೆಗೆ ನಿರ್ಧಾರ ಮಾಡಲಾಗಿತ್ತು.

ಕರ್ನಾಟಕದಲ್ಲೇ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷದಿಂದ ವಾಸಿಸುತ್ತಿರುವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಕುರಿತು ಪರೀಕ್ಷೆಯಲ್ಲಿ ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸುವುದಾಗಿ ಹೇಳಲಾಗಿತ್ತು.

ಇದಕ್ಕೆ ಶಶಿತರೂರ್‌, ಮೋಹನ್‌ದಾಸ್ ಪೈ ಸೇರಿ ಪ್ರಮುಖರಿಂದ ವಿರೋಧ ವ್ಯಕ್ತವಾಗಿದ್ದರಿಂದ ಅಧಿವೇಶನದಲ್ಲಿ ಮಂಡಿಸಿರಲಿಲ್ಲ. ಇದೀಗ ಮತ್ತೆ ಕನ್ನಡಿಗರಿಗೆ ಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿದೆ.

Read more Articles on