ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ಉಳಿವಿಗಾಗಿ, ಸ್ಥಳೀಯ ಕನ್ನಡಿಗರ ಉದ್ಯೋಗಕ್ಕಾಗಿ ಹಾಗೂ ಆಡಳಿತದಲ್ಲಿ ಕನ್ನಡ ಭಾಷೆಗಾಗಿ ಹಕ್ಕೊತ್ತಾಯ ಮುಂದಿಟ್ಟು ಇಲ್ಲಿನ ಶ್ರೀ ಭುವನೇಶ್ವರಿ ಕನ್ನಡ ಸಂಘ, ಡಿಟಿಎಎ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ನೂರಾರು ನಾಗರಿಕರು, ವಿದ್ಯಾರ್ಥಿಗಳು ಭಾಗಿಯಾದರು.
ಇಲ್ಲಿನ ಸಿದ್ದಲಿಂಗಯ್ಯ ವೃತ್ತದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ನಿವೃತ್ತ ಎನ್‌ಸಿಸಿ ಅಧಿಕಾರಿ ಮೇಜರ್ ಎಸ್.ಮಹಾಬಲೇಶ್ವರ್, ಭಾಷೆಯ ವಿಚಾರವನ್ನು ಆರೋಗ್ಯದ ವಿಚಾರವಾಗಿಯೂ ಪರಿಗಣಿಸಿ ವಿನೂತನ ರೀತಿಯಲ್ಲಿ ಕನ್ನಡದ ಚಿಂತನೆಯನ್ನು ಅನುಷ್ಠಾನಗೊಳಿಸುತ್ತಿರುವ ಪ್ರಯತ್ನ ಶ್ಲಾಘನೀಯ. ಯುವಜನತೆ ಆರೋಗ್ಯದ ರಕ್ಷಣೆಗೆ ಆದ್ಯತೆ ನೀಡಬೇಕು. ಸ್ಥಳೀಯ ಭಾಷೆ, ಸಂಸ್ಕೃತಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ತಾಲೂಕಿನಲ್ಲಿ ತೆಲುಗು ತಮಿಳು ಚಲನಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುವಂತೆ ಹೋರಾಟ ನಡೆಸಿದ ಹೆಗ್ಗಳಿಕೆ ಭುವನೇಶ್ವರಿ ಕನ್ನಡ ಸಂಘಕ್ಕೆ ಸಲ್ಲುತ್ತದೆ ಎಂದರು.
ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್ ಮಾತನಾಡಿ, ಇಂತಹ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಯಿಂದ ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸುವುದಷ್ಟೇ ಅಲ್ಲದೇ ಭಾಷೆ ಕುರಿತು ಅಭಿಮಾನ ಹೆಚ್ಚುತ್ತದೆ. ಓಟ ಕೇವಲ ದೈಹಿಕವಾಗಿ ಶಕ್ತಿ ನೀಡುವುದಲ್ಲದೆ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢರನ್ನಾಗಿ ಮಾಡುತ್ತದೆ ಎಂದರು.ಸಿದ್ದಲಿಂಗಯ್ಯ ವೃತ್ತದಿಂದ ಆರಂಭವಾದ ಮ್ಯಾರಾಥಾನ್, ಜಯಚಾಮರಾಜೇಂದ್ರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಬಿಎಂಶ್ರೀ ರಸ್ತೆ, ಡಿಕ್ರಾಸ್‌ನ ಡಾ.ರಾಜ್‌ಕುಮಾರ್ ವೃತ್ತ, ಪ್ರವಾಸಿ ಮಂದಿರ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವ ಭವನ ಬಳಿಯ ಜಿ.ರಾಮೇಗೌಡ ವೃತ್ತದ ಮೂಲಕ ಭಗತ್‌ಸಿಂಗ್ ಕ್ರೀಡಾಂಗಣ ತಲುಪಿತು.
ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮ್ಯಾರಾಥಾನ್‌ನಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಹಲವು ಗಣ್ಯರನ್ನು ಅಭಿನಂದಿಸಲಾಯಿತು. ಜೆಡಿಎಸ್ ಮುಖಂಡ ಹರೀಶ್‌ಗೌಡ, ನಗರಸಭೆ ಉಪಾಧ್ಯಕ್ಷ ರೈಲ್ವೇಸ್ಟೇಷನ್ ಮಲ್ಲೇಶ್, ನಗರಸಭೆ ಸದಸ್ಯ ವಿ.ಎಸ್.ರವಿಕುಮಾರ್, ಶಿವಶಂಕರ್, ನಾಗರಾಜ್, ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ತಾ.ಕಸಾಪ ಅಧ್ಯಕ್ಷ ಗೋವಿಂದರಾಜು, ನಿವೃತ್ತ ಅಧ್ಯಾಪಕ ಮಹಾಲಿಂಗಯ್ಯ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್ ಪ್ರಭುದೇವ್ ಉಪಸ್ಥಿತರಿದ್ದರು.17ಕೆಡಿಬಿಪಿ5- ಕನ್ನಡಿಗರಿಗೆ ಉದ್ಯೋಗ ಸಂಕಲ್ಪದೊಂದಿಗೆ ದೊಡ್ಡಬಳ್ಳಾಪುರದಲ್ಲಿ ಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ ಭಾನುವಾರ ನಡೆದ ಕನ್ನಡಕ್ಕಾಗಿ ಓಟದಲ್ಲಿ ನೂರಾರು ನಾಗರಿಕರು ಭಾಗಿಯಾದರು.