ಪ್ರತಿಯೊಂದು ಮನೆಗೆ ಮಹಿಳೆಯೇ ಸ್ಫೂರ್ತಿ, ಶಕ್ತಿ ಮನೆಯ ನಂದಾದೀಪ. ಅವಳು ಸದೃಢಳಾದರೆ ಮನೆ ನಂದಗೋಕುಲ. ಅಂತಹ ಮಹಿಳೆ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಜೀವನದಲ್ಲಿ ಹಿನ್ನಡೆ ಅನುಭವಿಸಬಾರದು ಎಂಬ ಕಳಕಳಿ ಸಮಾಜಕ್ಕೆ ಅರಿವಾಗಬೇಕು.

ಧಾರವಾಡ:

ಪ್ರತಿಯೊಂದು ಮನೆಗೆ ಮಹಿಳೆಯೇ ಸ್ಫೂರ್ತಿ, ಶಕ್ತಿ ಮನೆಯ ನಂದಾದೀಪ. ಅವಳು ಸದೃಢಳಾದರೆ ಮನೆ ನಂದಗೋಕುಲ. ಅಂತಹ ಮಹಿಳೆ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಜೀವನದಲ್ಲಿ ಹಿನ್ನಡೆ ಅನುಭವಿಸಬಾರದು ಎಂಬ ಕಳಕಳಿ ಸಮಾಜಕ್ಕೆ ಅರಿವಾಗಬೇಕು ಎಂದು ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ರ‍್ಯಾಪಿಡ್ ಸಂಸ್ಥೆ ಮತ್ತು ಮೂರ್ತಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯೋಗಮೇಳ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮಹಿಳೆ ಕೇವಲ ಉದ್ಯೋಗದ ಹುಡುಕಾಟದಲ್ಲಿರುವ ವ್ಯಕ್ತಿಯಲ್ಲ. ಅವಳು ಕುಟುಂಬದ ಆಧಾರಸ್ತಂಭ. ಉದ್ಯೋಗ ಸೇರುವುದು ಆಕೆಯ ಆರ್ಥಿಕ ಸ್ವಾವಲಂಬನೆಗೆ ಮಾತ್ರವಲ್ಲ. ಆಕೆಯ ಆತ್ಮಗೌರವ, ಆತ್ಮವಿಶ್ವಾಸ ಮತ್ತು ನಿರ್ಧಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಕುಟುಂಬ ಸುಸ್ತಿರವಾಗಿಬೇಕೆಂದರೇ ಮುಖ್ಯವಾಗಿ ಆ ಕುಟುಂಬ ಆರ್ಥಿಕವಾಗಿ ಸುಸ್ತಿರವಾಗಿರಬೇಕು. ಆರ್ಥಿಕ ಸ್ಥಿರತೆಗೆ ಉದ್ಯೋಗವೊಂದೇ ರಾಮಬಾಣ. ಈ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ ಗ್ರಾಮಾಭಿವೃದ್ಧಿ, ರುಡ್‌ಸೆಟ್ ಸಂಸ್ಥೆಗಳ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಕಾರ್ಯಗಳಿಂದ ಪ್ರೇರಿತರಾಗಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ನಿರುದ್ಯೋಗ ನಿವಾರಣೆ, ಆರ್ಥಿಕ ಸುಭದ್ರತೆ ಒದಗಿಸುವತ್ತ ಜೆಎಸ್‌ಎಸ್ ದಾಪುಗಾಲು ಇಡುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಮಾತನಾಡಿ, ಮಹಿಳೆ ಅಬಲೆ ಅಲ್ಲ ಸಬಲೇ. ಪುರುಷರು ಮಾತ್ರ ಸಂಪಾದನೆ ಮಾಡಿ ಮನೆಯವರೆಲ್ಲ ಆರಾಮವಾಗಿ ಜೀವನ ನಡೆಸಬಹುದಾಗಿತ್ತು. ಆದರೆ, ಈಗ ಪತಿಯೊಂದಿಗೆ ಸತಿಯೂ ಉದ್ಯೋಗ ಮಾಡಿದರೇ ಮಾತ್ರ ಜೀವನ ನಡೆಸುವ ಕಾಲವಿದೆ ಎಂದು ಹೇಳಿದರು.

ರ್‍ಯಾಪಿಡ್‌ ಸಂಸ್ಥೆಯ ಕಾರ್ಯದರ್ಶಿ ವಾಣಿಶ್ರೀ ಪುರೋಹಿತರ ಮಾತನಾಡಿ, ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ ಕುಟುಂಬಗಳ ಸ್ಥಿರತೆ ಹೆಚ್ಚುತ್ತದೆ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದಲ್ಲಿ ಗುಣಾತ್ಮಕ ಬದಲಾವಣೆ ಕಂಡುಬರುತ್ತದೆ. ಸಮುದಾಯದ ಒಟ್ಟು ಅಭಿವೃದ್ಧಿಗೆ ಸಹಕಾರ ದೊರಕುತ್ತದೆ. ಮಹಿಳೆಯರಿಗೆ ಉದ್ಯೋಗಮೇಳ ಆಯೋಜಿಸಿ ಅವರ ಸಾಮರ್ಥ್ಯ ಗುರುತಿಸಿ, ಬೆಳೆಯಲು ವೇದಿಕೆ ಕಲ್ಪಿಸುವುದು ಎಂದರು.

ರ‍್ಯಾಪಿಡ್ ಸಂಸ್ಥೆಯ ಸಿಇಒ ಮಾಲವಿಕಾ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಸಂಸ್ಥೆಯು ಕಳೆದ 20 ವರ್ಷಗಳಿಂದ 300ಕ್ಕೂ ಹೆಚ್ಚು ಕ್ಯಾಂಪಸ್ ಸಂದರ್ಶನ ಹಾಗೂ 20ಕ್ಕೂ ಹೆಚ್ಚು ಉದ್ಯೋಗ ಮೇಳ ಆಯೋಜಿಸುವ 80 ಸಾವಿರಕ್ಕೂ ಹೆಚ್ಚು ಜನರಿಗೆ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಿದೆ ಎಂದರು.

ಈ ಉದ್ಯೋಗಮೇಳದಲ್ಲಿ ಒಟ್ಟು 1362 ಅಭ್ಯರ್ಥಿಗಳು ಭಾಗವಹಿಸಿದ್ದರು. 341 ಅಭ್ಯರ್ಥಿಗಳು ಕೊನೆಯ ಸುತ್ತಿಗೆ ಆಯ್ಕೆಯಾದರು. 98 ಜನ ಉದ್ಯೋಗ ಪಡೆದುಕೊಂಡರು. ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮತ್ತಿತರರು ಇದ್ದರು.