ಸಾರಾಂಶ
ಶಿವಮೊಗ್ಗ : ಜೋಗ ನಿರ್ವಹಣಾ ಪ್ರಾಧಿಕಾರದ ವಿವಿಧ ಸ್ತರಗಳಲ್ಲಿ ಒಟ್ಟು 20 ಜನ ಸಿಬ್ಬಂದಿ ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಸೇವೆ ಸಲ್ಲಿಸುತ್ತಿದ್ದು, ಅವರ ವೇತನ ಪಾವತಿಗೆ ಅನುದಾನ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಪ್ರವೇಶ ಶುಲ್ಕ ಏರಿಕೆ ಅನಿವಾರ್ಯವಾಗಿದೆ ಎಂದು ಜೋಗ ನಿರ್ವಹಣಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಜೋಗ ನಿರ್ವಹಣಾ ಪ್ರಾಧಿಕಾರ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ಕುರಿತು ಕನ್ನಡಪ್ರಭ ಸೆ.2ರಂದು ಜೋಗ ವೀಕ್ಷಣೆಗೆ ಶುಲ್ಕ ಹೆಚ್ಚಳ: ಪ್ರವಾಸಿಗರಿಗೆ ಬರೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸಹಾಯಕ ನಿರ್ದೇಶಕರು ಹಾಗೂ ಜಂಟಿ ಕಾರ್ಯದರ್ಶಿ ಅವರು ಪತ್ರಿಕಾ ಪ್ರಕಟಣೆ ನೀಡಿ, ಕಳೆದ ವರ್ಷದ ಆಯವ್ಯಯ ಪರಿಶೀಲಿಸಿದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಜಿಲ್ಲಾಧಿಕಾರಿ ಅವರು ಪ್ರವೇಶ ಶುಲ್ಕದಲ್ಲಿ ಅಲ್ಪ ಪ್ರಮಾಣದ ಏರಿಕ ಮಾಡಿ ಆದೇಶ ಹೊರರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜೋಗ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರವಾಸಿಗರ ಸುರಕ್ಷತೆ, ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಪ್ರಾಧಿಕಾರದ ಸ್ವಚ್ಚತೆಯನ್ನು ಕಾಪಾಡುವ ಉದ್ದೇಶದಿಂದ ಪ್ರಾಧಿಕಾರದ ವಿವಿಧ ಸ್ತರಗಳಲ್ಲಿ ಒಟ್ಟು 20 ಜನ ಸಿಬ್ಬಂದಿ ಹೊರ ಸಂಪನ್ಮೂಲ ಏಜೆನ್ಸಿಯ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮಾಸಿಕ ವೇತನ ಪಾವತಿಸಲು ಸರ್ಕಾರದಿಂದ ಅನುದಾನ ಇಲ್ಲ. ಪ್ರವೇಶ ದ್ವಾರದಲ್ಲಿ ಶುಲ್ಕ ಸಂಗ್ರಹಿಸಿದ ಕಾರ್ಯವನ್ನು ನಿರ್ವಹಿಸಿದ ಕೆಎಸ್‌ಟಿಡಿಸಿ( KSTDC) ಯವರಿಗೆ ಶೇ.20 ರಷ್ಟು ಆದಾಯ ಸಂದಾಯವಾಗುತ್ತದೆ. ಶೇ.80 ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಸಂದಾಯವಾಗುತ್ತದೆ. ಪ್ರಾಧಿಕಾರಕ್ಕೆ ಸಂದಾಯವಾದ ಶೇ. 80 ಆದಾಯದಲ್ಲಿ ಶೇ.18 ರಷ್ಟು ಜಿಎಸ್‌ಟಿ ಪಾವತಿಸಬೇಕು. ಉಳಿದ ಅನುದಾನದಲ್ಲಿ 20 ಜನ ಸಿಬ್ಬಂದಿಗೆ ಕನಿಷ್ಠ ವೇತನ ನಿಯಮದಡಿ ವೇತನ ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.
2023-24 ನೇ ಸಾಲಿನಲ್ಲಿ ಸಂಗ್ರಹಿಸಿದ ಹಣಕ್ಕಿಂತ ಸಿಬ್ಬಂದಿಗೆ ವೇತನ ವೆಚ್ಚದ ಹಣವೇ ಹೆಚ್ಚಾಗಿರುವುದು ಕಂಡು ಬರುತ್ತದೆ. ಆದ್ದರಿಂದ ವೇತನ ಪಾವತಿಗೆ ಅನುದಾನ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಪ್ರವೇಶ ಶುಲ್ಕ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.