ಹೊಸ ವರ್ಷದ ಮೋಜು ಮಸ್ತಿಗೆ ಜೋಯಿಡಾ ಸಜ್ಜು

| Published : Dec 31 2024, 01:03 AM IST

ಹೊಸ ವರ್ಷದ ಮೋಜು ಮಸ್ತಿಗೆ ಜೋಯಿಡಾ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಕ್ಯಾಸಲ್ ರಾಕ್‌ನಿಂದ ಅಣಶಿ ವರೆಗೆ ಎಲ್ಲಿ ನೋಡಿದರೂ ಪ್ರವಾಸಿಗರು ಹೊಸ ವರ್ಷದ ಸಂಭ್ರಮಾಚರಣೆಗೆ ಬೀಡು ಬಿಟ್ಟಿದ್ದಾರೆ.

ಅನಂತ ದೇಸಾಯಿ ಜೋಯಿಡಾ

ಜೋಯಿಡಾ: ಹೊಸ ವರ್ಷದ ಮೋಜು-ಮಸ್ತಿಗೆ ತಾಲೂಕು ಸಜ್ಜಾಗಿದೆ. ತಾಲೂಕಿನಲ್ಲಿರುವ ಎಲ್ಲ ರೆಸಾರ್ಟ್, ಹೋಮ್ ಸ್ಟೇಗಳು ಭರ್ತಿಯಾಗಿದ್ದು, ಪ್ರವಾಸಿಗರ ಸ್ವರ್ಗ ಎಂದೇ ಭಾವಿಸಲಾಗಿರುವ ಸುಂದರ ಪರಿಸರಗಳೂ, ಜನರಿಂದ ತುಂಬಿಕೊಳ್ಳುತ್ತಿವೆ. ಕ್ಯಾಸಲ್ ರಾಕ್‌ನಿಂದ ಅಣಶಿ ವರೆಗೆ ಎಲ್ಲಿ ನೋಡಿದರೂ ಪ್ರವಾಸಿಗರು ಹೊಸ ವರ್ಷದ ಸಂಭ್ರಮಾಚರಣೆಗೆ ಬೀಡು ಬಿಟ್ಟಿದ್ದಾರೆ. ಎಲ್ಲ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಮೊದಲೇ ಸ್ಥಳ ಕಾದಿರಿಸಿದ್ದ ಕಾರಣ ಈಗ ಬಂದವರು ಸಿಕ್ಕ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.

ಗಣೇಶಗುಡಿಯ ರಾಫ್ಟಿಂಗ್‌ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದ್ದು, ಜನರು ತಂಡೋಪತಂಡವಾಗಿ ಬಂದು ಜಲಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಕೆಲವರು ಸುಂದರ ಪರಿಸರ, ಜುಳು ಜುಳು ಹರಿಯುವ ನದಿಯ ಸೊಬಗನ್ನು ಸವಿದರೆ, ಚಾರಣಪ್ರಿಯರು ಏದುಸಿರು ಬಿಡುತ್ತ ಚಾರಣದ ಖುಷಿ, ಸ್ವಚ್ಛಂದ ಗಾಳಿಯನ್ನು ಅನುಭವಿಸುತ್ತಿದ್ದಾರೆ. ಎರಡು ದಿನಗಳ ಮೊದಲೇ ಬಂದು ಹೊಸವರ್ಷದ ಶುಭಾಶಯಗಳನ್ನು ಹೇಳಲು ಕಾಯುತ್ತಿದ್ದು, ರೆಸಾರ್ಟ್‌ನವರು ಎಲ್ಲ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರನ್ನು ಖುಷಿ ಪಡಿಸುತ್ತಿದ್ದಾರೆ.

ತಾಲೂಕಿನಲ್ಲಿರುವ ಹೆಚ್ಚಿನ ರೆಸಾರ್ಟ್ ಹೋಮ್ ಸ್ಟೇಗಳು ದಾಂಡೇಲಿಯ ಹೆಸರಿನಲ್ಲಿಯೇ ನಡೆಯುತ್ತಿದೆ. ಈ ಬಗ್ಗೆ ಹಿಂದೆ ಚರ್ಚೆಗಳು ನಡೆದಿದ್ದು, ಪ್ರವಾಸೋದ್ಯಮ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ತಿಳಿದು ಬರಬೇಕಾಗಿದೆ.

ಹೊಸ ವರ್ಷದ ಮೋಜು-ಮಸ್ತಿಗಳು ಮಿತಿಯಲ್ಲಿರಲು ಆರಕ್ಷಕರು ನಿದ್ದೆ ಬಿಟ್ಟು ಕಾಯುತ್ತಿದ್ದಾರೆ. ಜೋಯಿಡಾ ತಾಲೂಕಿನ ಪರಿಸರ, ನೋಡಿದಷ್ಟೂ ನೋಡಬೇಕೆಂಬ ಆಸೆ ತರುತ್ತಿದೆ. ಇಂತ ಪರಿಸರ, ಜುಳು ಜುಳು ನಿನಾದ ಯಾರಿಗೆ ತಾನೇ ಇಷ್ಟವಿಲ್ಲ. ಹಾಗಾಗಿ, ಪ್ರವಾಸಿಗರು ಭೇಟಿ ನೀಡುತ್ತಾರೆ, ಸಿಂತೆರಿ ರಾಕ್ಸ್, ಕಂಚಿಕಲ್ಲುಗಳನ್ನು ಪ್ರವಾಸಿಗರ ಸ್ವರ್ಗ ಎಂದೇ ಹೇಳಲಾಗುತ್ತದೆ.