ಸಾರಾಂಶ
ನಗರದ ಅಭಿವೃದ್ದಿಗೆ ನಗರಸಭಾ ಸದಸ್ಯರು ಪಕ್ಷಾತೀತವಾಗಿ ಕೈಜೋಡಿಸಬೇಕು.
ಗಂಗಾವತಿ ನಗರಸಭೆಯ ತುರ್ತು ಸಭೆ
ಕನ್ನಡಪ್ರಭ ವಾರ್ತೆ ಗಂಗಾವತಿನಗರದ ಅಭಿವೃದ್ದಿಗೆ ನಗರಸಭಾ ಸದಸ್ಯರು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಜರುಗಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹು ದಿನಗಳಿಂದ ನಗರಸಭೆಗೆ ಆಡಳಿತ ಮಂಡಳಿ ಇರಲಿಲ್ಲ. ಈಗ ಹೊಸ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಈಗ ನಗರದ 35 ವಾರ್ಡುಗಳಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಎಲ್ಲ ಸದಸ್ಯರು ಕೈಜೋಡಿಸಬೇಕು ಎಂದರು.ನಗರೋತ್ಥಾನ ಯೋಜನೆಯಡಿಯಲ್ಲಿ ನಗರದ ಅಭಿವೃದ್ಧಿಗೆ ₹40 ಕೋಟಿ ಅನುದಾನ ಬಂದಿದೆ. ಇದರಲ್ಲಿ ಯಾವ ವಾರ್ಡುಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆನ್ನುವದರ ಬಗ್ಗೆ ಸದಸ್ಯರು ಪೌರಾಯುಕ್ತರಿಗೆ ಸಲಹೆ ನೀಡಬೇಕು ಎಂದರು.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುಂಡಮ್ಮ ಕ್ಯಾಂಪಿನಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆಗೆ ಶೀಘ್ರದಲ್ಲಿ ತರಕಾರಿ ಮತ್ತು ಮಟನ್ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದರು.ನಗರದಲ್ಲಿ ರಸ್ತೆ ಮಧ್ಯೆ ವಿದ್ಯುತ್ ದೀಪ ಹಾಕಲಾಗುತ್ತಿದ್ದು, ನಗರ ಸುಂದರವಾಗಿ ಕಾಣಲಿದೆ ಎಂದು ಶಾಸಕರು ತಿಳಿಸಿದಾಗ, ಸದಸ್ಯ ಮನೋಹರಸ್ವಾಮಿ ಪ್ರತಿಕ್ರಿಯಿಸಿ ತುರ್ತು ಸಭೆಯಲ್ಲಿ ಈ ವಿಷಯ ಚರ್ಚೆಯಾಗುವುದಕ್ಕಿಂತ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚಿಸಿ ಒಪ್ಪಿಗೆ ಪಡೆಯಬಹುದಾಗಿತ್ತು ಎಂದರು.
ಅಲ್ಲದೇ ಈಚೆಗೆ ಮಳೆ ಹಾನಿಯಿಂದ ಮನೆಗಳನ್ನು ಕೆಲವರು ಕಳೆದುಕೊಂಡಿದ್ದು, ಸದಸ್ಯರು ತಮ್ಮ ವಾರ್ಡುಗಳಲ್ಲಿ ಮನೆಗಳು ಬಿದ್ದಿರುವುದು ಮತ್ತು ನಿರಾಶ್ರಿತರಾದವರ ಮಾಹಿತಿಯನ್ನು ನಗರಸಭೆಗೆ ಕೊಟ್ಟರೆ ಕೂಡಲೇ ಪರಿಹಾರ ಕೆಲಸ ಮಾಡುವುದಾಗಿ ಶಾಸಕರು ತಿಳಿಸಿದರು.₹500 ಕೋಟಿಗೆ ಪ್ರಸ್ತಾವ:
ಗಂಗಾವತಿ ನಗರ ಸೇರಿದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ₹500 ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯ ಮಾಜಿ ಸಚಿವರು, ಮುಖಂಡರು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದರೆ ₹500 ಕೋಟಿ ಅನುದಾನ ತರಲಾಗುವುದು ಎಂದರು.ಆಕ್ಷೇಪ:
ಕಳೆದ ಎರಡು ದಿನಗಳ ಹಿಂದೆ ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭ ಬಿಜೆಪಿ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು, ಅದರಲ್ಲೂ ಅಧಿಕಾರಿಗಳ ಸಮ್ಮುಖದಲ್ಲಿ ವಿಜಯೋತ್ಸವ ಮಾಡಿದ್ದಾರೆ. ಇದರಿಂದ ನಗರಸಭೆ ಕಚೇರಿ ದುರಪಯೋಗವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಆರೋಪಿಸಿದರು. ವಿಜಯೋತ್ಸವ ಆಚರಿಸುವುದರಲ್ಲಿ ತಪ್ಪೇನು ಎಂದು ಬಿಜೆಪಿ ಸದಸ್ಯ ರಮೇಶ ಚೌಡ್ಕಿ ವಾಗ್ವಾದ ನಡೆಸಿದರು.ಈದ್ಗಾ ಪಕ್ಕದಲ್ಲಿ ನಾಮಫಲಕ ಹಾಕುವುದಕ್ಕೆ ಶಾಸಕರು ಸಲಹೆ ನೀಡಿದರೆ ಕೆಲ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ನಗರಸಭೆ ನೂತನ ಅಧ್ಯಕ್ಷ ಮೌಲಾಸಾಬ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಪಾರ್ವತಮ್ಮ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಇದ್ದರು. ಸಭೆಯಲ್ಲಿ ಸದಸ್ಯರಾದ ಪರುಶರಾಮ ಮಡ್ಡೇರ್, ವಾಸುದೇವ ನವಲಿ, ಕಾಸಿಂಸಾಬ ಗದ್ವಾಲ್, ಸುನೀತಾ ಶ್ಯಾವಿ, ಎಫ್. ರಾಘವೇಂದ್ರ, ಜಬ್ಬರ್, ಉಸ್ಮಾನ್ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.