ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ಕಪ್ಪತಗುಡ್ಡಕ್ಕೆ ಬೆಂಕಿ ಬೀಳಲು ಜನರಲ್ಲಿ ಬೇರೂರಿರುವ ಅನೇಕ ಮೂಢನಂಬಿಕೆಗಳೇ ಕಾರಣ. ಅವುಗಳನ್ನು ಹೋಗಲಾಡಿಸುವ ಜಾಗೃತಿಯನ್ನು ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಮುಂಡರಗಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡ ನಮ್ಮೆಲ್ಲರ ಹೆಮ್ಮೆ ಮತ್ತು ಉಸಿರು. ಅದರ ಸಂರಕ್ಷಣೆ ನೆಮ್ಮಲ್ಲರ ಹೊಣೆಯಾಗಿದೆ. ಹೀಗಾಗಿ ಕಪ್ಪತ್ತಗುಡ್ಡದ ಉಳಿವಿಗಾಗಿ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.ಮಂಗಳವಾರ ಸಂಜೆ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಆವರಣದಲ್ಲಿ ಗದಗ ಪ್ರಾದೇಶಿಕ ಅರಣ್ಯ ವಿಭಾಗ, ಕಪ್ಪತ್ತಗುಡ್ಡ ವನ್ಯಜೀವಿಧಾಮ, ಕಪ್ಪತ್ತ ಹಿಲ್ಸ್ ವಲಯ ಮುಂಡರಗಿ ಇವುಗಳ ಸಹಯೋಗದಲ್ಲಿ ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿ ಕಾಡ್ಗಿಚ್ಚುಗಳ ತಡೆಗೆ ಜಾಗೃತಿ ಪ್ರಯುಕ್ತ ಹಮ್ಮಿಕೊಂಡಿರುವ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚದಂತೆ ಜಾಗೃತಿ ವಹಿಸಿ ಕಪ್ಪತ್ತಗುಡ್ಡದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಬೇಕು. ನಮ್ಮ ಕಪ್ಪತ್ತಗುಡ್ಡ ನಮ್ಮ ಹೆಮ್ಮೆ ಅಂದಾಗ ಮಾತ್ರ ಕಪ್ಪತ್ತಗುಡ್ಡ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲಿ ಕಪ್ಪತ್ತಗುಡ್ಡ ಇರುವುದರಿಂದ ಏಷ್ಯಾ ಖಂಡದಲ್ಲಿಯೇ ಗದಗ ಜಿಲ್ಲೆ ಶುದ್ಧ ಗಾಳಿಗೆ ಹೆಸರುವಾಸಿಯಾಗಿದೆ ಎಂದರು.

ಕಪ್ಪತ್ತಗುಡ್ಡದಲ್ಲಿ ಇನ್ನೂ ಹೆಚ್ಚು ಗಿಡ, ಮರಗಳನ್ನು ಬೆಳೆಸಿದರೆ ಮಾತ್ರ ಹೆಚ್ಚಿಗೆ ಆಮ್ಲಜನಿಕ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಮನುಷ್ಯರು ಆರೋಗ್ಯಂತರಾಗಿ ಇರುವುದರೊಂದಿಗೆ ನಮ್ಮ ಪರಿಸರವೂ ಚೆನ್ನಾಗಿರಲು ಸಾಧ್ಯವಾಗುತ್ತದೆ. ಕಪ್ಪತ್ತಗುಡ್ಡ ಈ ಭಾಗದ ಜನರ ಸಂಪತ್ತು. ಅದರ ಸಂರಕ್ಷಣೆ ಹಾಗೂ ಅಭಿವೃದ್ಧಿಯು ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದರು.ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ಕಪ್ಪತಗುಡ್ಡಕ್ಕೆ ಬೆಂಕಿ ಬೀಳಲು ಜನರಲ್ಲಿ ಬೇರೂರಿರುವ ಅನೇಕ ಮೂಡನಂಬಿಕೆಗಳೇ ಕಾರಣ. ಅವುಗಳನ್ನು ಹೋಗಲಾಡಿಸುವ ಜಾಗೃತಿಯನ್ನು ಮೂಡಿಸುವುದು ಅತ್ಯಂತ ಅವಶ್ಯವಾಗಿದೆ. ಸರ್ಕಾರ ಹೆಚ್ಚು ಆಸಕ್ತಿ ವಹಿಸಿ ಕಪ್ಪತ್ತಗುಡ್ಡವನ್ನು ಉಳಿಸಿ, ಬೆಳೆಸಬೇಕು ಎಂದರು.

ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಪ್ಪತ್ತಗುಡ್ಡ ರಕ್ಷಣೆ ಈ ಭಾಗದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಪ್ಪತ್ತಗುಡ್ಡದಲ್ಲಿ ಅನ್ನದಾನೀಶ್ವರರು ತಪ್ಪಸ್ಸು ಮಾಡಿದ ಶಕ್ತಿ ಇದೆ. ಬೇಸಿಗೆಯಲ್ಲಿ ಬೀಳುವ ಬೆಂಕಿಯನ್ನು ತಡೆಗಟ್ಟಿದರೆ ಕಪ್ಪತಗುಡ್ಡ ಹುಲಸಾಗಿ ಬೆಳೆದು ನಮಗೆಲ್ಲ ಆಸರೆಯಾಗುತ್ತದೆ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಪರಿಸರ ಮತ್ತು ಕಪ್ಪತ್ತಗುಡ್ಡದ ಮಹತ್ವ ಕುರಿತು ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರಣ್ಯ ಕೃಷಿ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸನ್ಮಾನಿಸಲಾಗಿತು. ಸುಮಾರು 200ಕ್ಕೂ ಹೆಚ್ಚು ಕುರಿಗಾರರಿಗೆ ಅವರಿಗೆ ಅನುಕೂಲಕರ ಸಾಮಾನುಗಳ ಕಿಟ್‌ ನೀಡಿ ಗೌರವಿಸಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚದಂತೆ ಕಾಳಜಿ ವಹಿಸಬೇಕೆಂದು ತಿಳಿವಳಿಕೆ ನೀಡಲಾಯಿತು. ಕಲಾವಿದ ನಿಂಗಪ್ಪ ಗುಡ್ಡದ ಹಾಗೂ ಸಂಗಡಿಗರಿಂದ ಪರಿಸರ ಜಾಗೃತಿ ಗೀತೆಗಳು ಮೊಳಗಿದವು.

ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಡಿ.ಎಂ. ನಾಗರಳ್ಳಿ, ವಿ.ಎಫ್. ಅಂಡಗಿ, ಚಂದ್ರಹಾಸ ಉಳ್ಳಾಗಡ್ಡಿ, ಕುಮಾರಸ್ವಾಮಿ ಹಿರೇಮಠ, ಸೋಮನಗೌಡ ಪಾಟೀಲ, ಡಾ. ಮನೋಜ ಕೊಪರ್ಡೆ, ದೇವು ಹಡಪದ, ಶಿವಕುಮಾರ ಕುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಪ್ಪತ್ ಹಿಲ್ಸ್ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಲಾರಪ್ಪ ಮಡಿವಾಳರ ಸ್ವಾಗತಿಸಿದರು. ಮಂಜುನಾಥ ಲಾಂಡ್ವೆ ನಿರೂಪಿಸಿ, ವಂದಿಸಿದರು.