ದಾಂಡೇಲಿ ನಗರದ ಹಾರ್ನ್‌ಬಿಲ್ ಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಹಾರ್ನ್‌ಬಿಲ್ ಹಕ್ಕಿ ಹಬ್ಬದ ಕಾರ್ಯಕ್ರಮವನ್ನು ಶುಕ್ರವಾರ ರಾಜ್ಯದ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಉದ್ಘಾಟಿಸಿದರು.
ದಾಂಡೇಲಿ: ಕಾಡು ಸಂರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರಾಣಿ, ಪಕ್ಷಗಳ ಸಂರಕ್ಷಣೆ ಮುಖ್ಯ. ಹಾಗಾಗಿ ವನ್ಯಜೀವಿ ಸಂರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ರಾಜ್ಯದ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಹೇಳಿದರು.
ನಗರದ ಹಾರ್ನ್‌ಬಿಲ್ ಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಹಾರ್ನ್‌ಬಿಲ್ ಹಕ್ಕಿ ಹಬ್ಬದ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಾರ್ನ್‌ಬಿಲ್ ಹಕ್ಕಿ ಸಂರಕ್ಷಣೆ ಅತ್ಯಂತ ಮತ್ವದ ವಿಚಾರವಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಮಾತ್ರವಲ್ಲದೆ ಜನರು ಮತ್ತು ಮಾಧ್ಯಮಗಳ ಸಹಭಾಗಿತ್ವವಾದಲ್ಲಿ ಕಾಡು, ಕಾಡು ಪ್ರಾಣಿ ಮತ್ತು ಪಕ್ಷಿಗಳ ಸಂರಕ್ಷಣೆ ಆಗುತ್ತದೆ ಎಂದು ಹೇಳಿದರು.ಹಾರ್ನ್‌ಬಿಲ್ ಹಕ್ಕಿಗಳ ಜೀವನ ಕ್ರಮ, ವಂಶಾಭಿವೃದ್ಧಿ ಮತ್ತು ಪರಿಸರದಲ್ಲಿನ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜನರಿಗೆ ಅರಿವು ಮೂಡಿಸುವುದು ಬಹಳ ಮುಖ್ಯ ಎಂದ ಅವರು, ಹಾರ್ನ್‌ಬಿಲ್ ಕುರಿತು ಪಕ್ಷಿತಜ್ಞರು ನೀಡುವ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಅರಣ್ಯ ವಲಯದ ಸಿಸಿಎಫ್ ಟಿ. ಹೀರಾಲಾಲ ಮಾತನಾಡಿ, ವಿಶ್ವದಲ್ಲಿ ೧೧ ಸಾವಿರಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇದ್ದು, ಅದರಲ್ಲಿ ೫೭ ಪ್ರಭೇದದ ಹಾರ್ನ್‌ಬಿಲ್ ಪಕ್ಷಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ೯ ಪ್ರಭೇದದ ಹಾರ್ನ್‌ಬಿಲ್ ಪಕ್ಷಿಗಳಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಪ್ರಭೇದ ಕಂಡುಬರುತ್ತವೆ. ಈ ಭಾಗದಲ್ಲಿ ಹಾರ್ನ್‌ಬಿಲ್ ಇಕೋಟೂರಿಜಂ ಆರಂಭಿಸುವ ಉದ್ದೇಶವಿದೆ ಎಂದ ಅವರು, ಇದು ಪರಿಸರ ಸಂರಕ್ಷಣೆಯ ಜತೆಗೆ ಸ್ಥಳೀಯರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲಿದೆ. ಈ ಹಾರ್ನಬಿಲ್ ಉತ್ಸವದಲ್ಲಿ ೧೦೦ಕ್ಕೂ ಹೆಚ್ಚು ತಜ್ಞರು ಮತ್ತು ಪರಿಸರ ಆಸಕ್ತರು ಹಾರ್ನಬಿಲ್ ಕುರಿತು ಮಾತನಾಡಲಿದ್ದಾರೆ ಎಂದರು.ಹಳಿಯಾಳ ಉಪವಿಭಾಗದ ಡಿಎಫ್‌ಒ ಪ್ರಶಾಂತಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಹಾರ್ನ್‌ಬಿಲ್ ಉತ್ಸವದ ಉದ್ದೇಶಗಳನ್ನು ವಿವರಿಸಿದರು. ಕಾರವಾರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಬೆಳಗಾವಿಯ ಮಂಜುನಾಥ ಚವ್ಹಾಣ, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯತಾ ವಾಸರೆ ಪ್ರಾರ್ಥನಾ ಗೀತೆ ಹಾಡಿದರು. ದಾಂಡೇಲಿ ಎಸಿಎಫ್ ಸಂತೋಷ ಚವ್ಹಾಣ ಸ್ವಾಗತಿಸಿದರು. ಶಿಕ್ಷಕಿ ಆಶಾ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಹಳಿಯಾಳ ಎಸಿಎಫ್ ಮಾಜಿ ಬೀರಪ್ಪ ವಂದಿಸಿದರು.ನಗರದ ಮುಖ್ಯ ಬೀದಿಗಳಲ್ಲಿ ಹಾರ್ನ್‌ಬಿಲ್ ಹಬ್ಬದ ಕುರಿತು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.