ಸಾರಾಂಶ
ಯಗಟೀಪುರದಲ್ಲಿ ಸಮುದಾಯಗಳ ಮುಖಂಡರಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ನಡೆಸಲಾಗುತ್ತಿರುವ ಸಮುದಾಯಗಳ ಮುಖಂಡರಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಜಾಗೃತಿ ಮತ್ತು ಸಂವೇದನಾ ಕಾರ್ಯಕ್ರಮಕ್ಕೆ ಸಹಕರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಮನ್ವಯ ಸಂಸ್ಥೆ ಸಂಯೋಜಕರಾದ ಶೈಲಶ್ರೀ ತಿಳಿಸಿದರು.
ತಾಲೂಕಿನ ಯಗಟೀಪುರದಲ್ಲಿ ವಿಕಸನ ಸಂಸ್ಥೆ ಮತ್ತು ರಾಜ್ಯಮಟ್ಟದ ಸಮನ್ವಯ ಸಂಸ್ಥೆ ಸಂಯೋಜನೆಯಲ್ಲಿ ಸಮುದಾಯಗಳ ಮುಖಂಡರಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಜಾಗೃತಿ ಮತ್ತು ಸಂವೇದನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ಇಲಾಖೆ, ಸಮುದಾಯ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಮಾದಕ ವಸ್ತುಗಳ ನಿಯಂತ್ರಣ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು. ಆರೋಗ್ಯಯುತ ಸಮಾಜ ನಿರ್ಮಾಣ ಹಾಗೂ ಜನರನ್ನು ಮಾದಕ ವ್ಯಸನದಿಂದ ಹೊರತರಲು ಪುನರ್ವಸತಿ ಕೇಂದ್ರಗಳಲ್ಲಿ ತೊಂದರೆಗೆ ಒಳಗಾದವರಿಗೆ ಚಿಕಿತ್ಸೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಎಲ್ಲರ ಸಹಯೋಗ ಮುಖ್ಯ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ರಾಜ್ ವಿಡಿಯೋಗಳ ಮೂಲಕ ಮಾದಕ ವಸ್ತುಗಳೆಂದರೆ ಯಾವುವು, ವ್ಯಸನಕ್ಕೆ ಏಕೆ ಒಳಗಾಗುತ್ತಾರೆ. ಅದರಿಂದ ಏನೆಲ್ಲ ದುಷ್ಪರಿಣಾಮಗಳು ಆಗುತ್ತವೆ ಮತ್ತು ಅದರಿಂದ ಹೇಗೆ ಹೊರ ಬರಬಹುದು ಎಂಬುದನ್ನು ಸಾಕ್ಷ್ಯ ಚಿತ್ರಗಳ ಮೂಲಕ ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಲಲಿತಾಮಣಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ದೇಹದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ವಿವರಿಸಿದರು.ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಯಗಟೀಪುರ ಪ್ರಸನ್ನ ಮಾತನಾಡಿ, ವ್ಯಸನಗಳಿಗೆ ಒಳಗಾದವರು ಆರೋಗ್ಯ ಹಾಳು ಮಾಡಿಕೊಂಡು ಕುಟುಂಬದ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಇದರಿಂದ ಹೊರಬರಲು ಎಲ್ಲರೂ ಕೈಜೋಡಿಸಬೇಕು ಎಂದರು.
ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸಮಿತಿ ಅಧ್ಯಕ್ಷ ಜಯಣ್ಣ, ಡಿಸಿಸಿ ಬ್ಯಾಂಕ್ ನ ನವೀನ್, ರಂಗಸ್ವಾಮಿ, ಭರತ್, ಗಿರೀಶ್, ಮಧು, ಓಂಕಾರಪ್ಪ, ಪ್ರಭಾಕರ್,ವಿಕಸನ ಸಂಸ್ಥೆ ಸಂಯೋಜಕ ಎಲ್.ಮುಕುಂದ್, ಗ್ರಾಪಂ ಸದಸ್ಯರಾದ ಪುಷ್ಪಲತಾ, ಆಶಾ ಕಾರ್ಯಕರ್ತೆ ರೂಪ, ವಸಂತ್, ಮಾದಪ್ಪ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.28ಕೆಕೆಡಿಯು2.
ಕಡೂರು ತಾಲೂಕಿನ ಯಗಟೀಪುರದಲ್ಲಿ ವಿಕಸನ ಸಂಸ್ಥೆ ಮತ್ತು ರಾಜ್ಯಮಟ್ಟದ ಸಮನ್ವಯ ಸಂಸ್ಥೆ ಸಂಯೋಜನೆಯಲ್ಲಿ ಸಮುದಾಯಗಳ ಮುಖಂಡರಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮ ಮತ್ತು ಸಂವೇದನಾ ಕಾರ್ಯಕ್ರಮವು ನಡೆಯಿತು.