ಅಪಘಾತ, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

| Published : Feb 16 2025, 01:49 AM IST

ಸಾರಾಂಶ

ಪ್ರತಿಯೊಬ್ಬರ ಜೀವ ಬಹಳ ಮುಖ್ಯ. ತಮ್ಮ ಅಮೂಲ್ಯವಾದ ಜೀವದ ಕುರಿತು ಅರಿವು ಹೊಂದಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು.

ಹುಬ್ಬಳ್ಳಿ:

ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಹೊಂದಬೇಕು. ಅಪಘಾತ, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಸಹಾಯಕ ಪೊಲೀಸ್ ಆಯುಕ್ತ ವಿನೋದ ಮುಕ್ತೇದಾರ ಹೇಳಿದರು.

ಇಲ್ಲಿನ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಬೆಂಗಳೂರು, ಹು-ಧಾ ಮೋಟಾರು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್, ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರ ಪ್ರವರ್ತಕರು ಹಾಗೂ ಹುಬ್ಬಳ್ಳಿ ಮೋಟಾರು ವಾಹನ ಡೀಲರ್ಸ್‌ಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರ ಜೀವ ಬಹಳ ಮುಖ್ಯ. ತಮ್ಮ ಅಮೂಲ್ಯವಾದ ಜೀವದ ಕುರಿತು ಅರಿವು ಹೊಂದಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು ಎಂದರು.

ವಾಹನ ಚಲಾಯಿಸುವ ಪೂರ್ವದಲ್ಲಿ ವಾಹನಕ್ಕೆ ಸಂಬಂಧಪಟ್ಟ ದಾಖಲೆ ಹೊಂದಿರಬೇಕು. ಲೈಸೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಚಿಕ್ಕ ಮಕ್ಕಳಿಗೆ ವಾಹನ ಚಲಾಯಿಸುವಂತೆ ಪ್ರೇರೇಪಿಸಬಾರದು. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಶೂನ್ಯ ಅಪಘಾತಗಳ ಪ್ರಮಾಣ ಸಾಧನೆಗೆ ಮುಂದಾಗಬೇಕಿದೆ. ಕಳೆದ ಒಂದು ತಿಂಗಳಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಯಶಸ್ವಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿದರು.

ಇದೇ ವೇಳೆ ಪ್ರಬಂಧ, ಚಿತ್ರಕಲೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಾದ ಎನ್.ಎಸ್. ಪೂಜಾರ, ಕೆ.ಎಸ್. ಹಿರೇಮಠ ಹಾಗೂ ಡ್ರೈವಿಂಗ್ ಸ್ಕೂಲ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಮೋಟಾರು ವಾಹನ ನಿರೀಕ್ಷಕ ಎಸ್.ಡಿ. ಬೆಲ್ಲದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಜಿ.ವಿ. ದಿನಮಣಿ ನಿರೂಪಿಸಿ, ವಂದಿಸಿದರು.