ಜೀತ ಕಾರ್ಮಿಕ ಪದ್ಧತಿ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಉಲ್ಲಂಘಿಸುವವರು ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಸಾಮಾಜಿಕ ಪಿಡುಗನ್ನು ಎಲ್ಲರೂ ಕೂಡಿಕೊಂಡು ಬೇರು ಸಮ್ಮೇತ ಕಿತ್ತೊಗೆಬೇಕು ಎಂದು ಸಿವಿಲ್ ನ್ಯಾಯಾಧೀಶ ಅಮಿತ ಘಟ್ಟಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಜೀತ ಕಾರ್ಮಿಕ ಪದ್ಧತಿ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಉಲ್ಲಂಘಿಸುವವರು ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಸಾಮಾಜಿಕ ಪಿಡುಗನ್ನು ಎಲ್ಲರೂ ಕೂಡಿಕೊಂಡು ಬೇರು ಸಮ್ಮೇತ ಕಿತ್ತೊಗೆಬೇಕು ಎಂದು ಸಿವಿಲ್ ನ್ಯಾಯಾಧೀಶ ಅಮಿತ ಘಟ್ಟಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ, ತಾಲೂಕು ಪಂಚಾಯತಿ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಜೀತ ಕಾರ್ಮಿಕ ಪದ್ಧತಿ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ವಿಷಯದ ಕುರಿತಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ಅವರನ್ನು ಶಿಕ್ಷಣವಂತರನ್ನಾಗಿ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾಲ ನೀಡಿದವರು ಸಾಲ ನೀಡದೇ ಇರುವಂತಹವರನ್ನು ತಮ್ಮಲ್ಲಿ ಜೀತಕ್ಕೆ ಇಟ್ಟುಕೊಳ್ಳುವ ಅನಿಷ್ಟ ಪದ್ಧತಿಯಿದೆ. ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವ ಮೂಲಕ ಅವರಿಗೆ ನ್ಯಾಯ ಒದಗಿಸಬೇಕಿದೆ. ನಮ್ಮಲ್ಲಿ ಜೀತ ಕಾರ್ಮಿಕ ಪದ್ಧತಿ, ಬಾಲಕಾರ್ಮಿಕ ಪದ್ಧತಿಗಳು ಕಂಡುಬಂದರೆ ತಕ್ಷಣವೇ ತಾಲೂಕು ಕಾನೂನು ಸಮಿತಿಯ ಗಮನಕ್ಕೆ ತಂದರೆ ಅಂತಹ ಪ್ರಕರಣಗಳನ್ನು ತಡೆಗಟ್ಟಿ ತಪ್ಪಿಸ್ಥತರನ್ನು ಶಿಕ್ಷೆಗೆ ಒಳಪಡಿಸಲಾಗುವದು. ಜೀತ ಪದ್ಧತಿ, ಬಾಲಕಾರ್ಮಿಕ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದರು.ನ್ಯಾಯವಾದಿ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಆರ್ಥಿಕ ಅಸಮಾನತೆಯಿಂದಾಗಿ ಸಾಲ ತೀರಿಸದೇ ಇರುವವರು ಸಾಲ ನೀಡಿದವರ ಹತ್ತಿರ ಜೀತಕ್ಕೆ ಇರುವ ಪರಿಸ್ಥಿತಿಯನ್ನು ನಾವು ಹಿಂದೆ ಕಾಣಬಹುದಾಗಿದೆ. ಇದನ್ನು ಮನಗಂಡ ಸರ್ಕಾರವು ಇಂತಹ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತಂದಿದೆ. ಜೀತ ಪದ್ಧತಿಯು ಹೋಗಲಾಡಿಸಬೇಕಾದರೇ ಸಮಾನತೆ ಬರಬೇಕಾಗಿದೆ. ಜೀತಕಾರ್ಮಿಕ ಪದ್ಥತಿ, ಬಾಲಕಾರ್ಮಿಕ ಪದ್ಧತಿಯನ್ನು ಸಮಾಜದಲ್ಲಿ ಸಂಪೂರ್ಣ ನಿರ್ಮೂಲನೆಯಾಗುವ ಅಗತ್ಯವಿದೆ ಎಂದರು.ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ದೇಸಾಯಿ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ನಂತರವೂ ಇಂತಹ ಅನಿಷ್ಟ ಪದ್ಧತಿಗಳು ಇರುವುದು ಖೇದಕರ ಸಂಗತಿ. 1976ರಲ್ಲಿ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ಬಂದಿದೆ. ಜಮೀನುದಾರರು ಜೀತಪದ್ಧತಿಯನ್ನು ಅನುಸರಿಸುತ್ತಿದ್ದರು. ಇಂತಹ ಪದ್ಧತಿ ನಿಲ್ಲಬೇಕಾದ ಅಗತ್ಯವಿದೆ ಎಂದರು.ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಐ.ಎಚ್.ಇನಾಂದಾರ ಮಾತನಾಡಿ, ನಮ್ಮ ಇಲಾಖೆಯು ಇಂತಹ ಪದ್ಧತಿಯ ಸಂಪೂರ್ಣ ನಿರ್ಮೂಲನೆಗಾಗಿ ಸದಾ ಶ್ರಮಿಸುತ್ತಿದೆ. ಇಂತಹ ಪದ್ಧತಿಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ತುಂಬಾ ಅಗತ್ಯವಿದೆ. ತಮ್ಮ ಸುತ್ತ-ಮುತ್ತಲೂ ಎಲ್ಲಿಯಾದರೂ ಕಂಡುಬಂದರೇ ನಮ್ಮ ಗಮನಕ್ಕೆ ತಂದರೆ ಇಲಾಖೆಯು ನೆರವು ನೀಡಲು ಸದಾ ಬದ್ಧವಿದೆ ಎಂದರು.ಗ್ರೇಡ್-2 ತಹಸೀಲ್ದಾರ್‌ ಎಚ್.ಎಸ್.ಅರಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಜೀತ ಕಾರ್ಮಿಕ ಪದ್ಧತಿ, ಬಾಲಕಾರ್ಮಿಕ ಪದ್ಧತಿಯ ಶೇ.10 ರಷ್ಟು ಇದೆ. ಇಂತಹ ಪದ್ಧತಿಗಳನ್ನು ಸಮಾಜದಲ್ಲಿ ಇರದಂತೆ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ನಮ್ಮ ಸುತ್ತ-ಮುತ್ತಲಿನ ಮಕ್ಕಳು ಬಾಲಕಾರ್ಮಿಕರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕ್ರತಿ ನೀಡುವ ಮೂಲಕ ಉತ್ತಮ ನಾಗರಿಕನ್ನಾಗಿ ಮಾಡಬೇಕಿದೆ ಎಂದರು.ನ್ಯಾಯವಾದಿ ಶಿಲ್ಪಾ ಮುಚಖಂಡಿ ಅವರು ಜೀತ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಬಿ.ಎಸ್.ಬೆಳ್ಳೊಳ್ಳಿ ಇದ್ದರು. ವಿರೇಶ ಗೂಡ್ಲಮನಿ ಸ್ವಾಗತಿಸಿ, ವಂದಿಸಿದರು.