ಅನಿಷ್ಠ ಪದ್ಧತಿ ಆಚರಿಸುವದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಈ ಪದ್ಧತಿಯ ನಿರ್ಮೂಲನೆಗೆ ಕೈ ಜೋಡಿಸಿ
ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಅನಿಷ್ಠ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕಿ ವಾಸಂತಿ ಉಪ್ಪಾರ ಹೇಳಿದ್ದಾರೆ.
ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಾಜಿ ದೇವದಾಸಿ ಮಹಿಳೆಯರೊಂದಿಗೆ ಜರುಗಿದ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವದಾಸಿ ಬಿಡುವ ಪದ್ಧತಿ ಅತ್ಯಂತ ಕೆಟ್ಟ ಸಾಮಾಜಿಕ ಪಿಡುಗು ಆಗಿದ್ದು, ಇದು ಮುಗ್ಧ ಮಹಿಳೆಯರ ಬದುಕನ್ನು ಕತ್ತಲೆಗೆ ನೂಕುತ್ತದೆ. ಈ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಸರ್ಕಾರ ಕಾನೂನು ಜಾರಿಗೆ ತಂದಿದ್ದು ಯಾವುದೇ ಮಹಿಳೆ ದೇವದಾಸಿ ಪದ್ಧತಿಗೆ ಒಳಪಡಿಸಿದಲ್ಲಿ ಅದಕ್ಕೆ ಕಾರಣರಾದವರಿಗೆ, ಅದಕ್ಕೆ ಪ್ರೋತ್ಸಾಹ ನೀಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಯಾವುದೇ ರೂಪದಲ್ಲಿ ದೇವದಾಸಿ ಪದ್ಧತಿ ಆಚರಿಸುವದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗಿರುತ್ತದೆ. ಹಾಗಾಗಿ ಮಾಜಿ ದೇವದಾಸಿಯರು ಈ ಅನಿಷ್ಠ ಪದ್ಧತಿ ಆಚರಿಸುವದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಈ ಪದ್ಧತಿಯ ನಿರ್ಮೂಲನೆಗೆ ಕೈ ಜೋಡಿಸಬೇಕೆಂದರು.ಸರ್ಕಾರವು ಮಾಜಿ ದೇವದಾಸಿಯರ ಸಮೀಕ್ಷೆ ನಡೆಸಿದ್ದು, ಸರ್ವೆ ವರದಿಯ ಆಧಾರದ ಮೇಲೆ ಮಾಜಿ ದೇವದಾಸಿ ಮಹಿಳೆಯರ ಜೀವನ ಸುಧಾರಣೆಗೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅಮರೇಶ್ ಹಾವಿನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಪೂರ್ಣಿಮಾ ಹಾಗೂ ಇಲಾಖೆಯ ಸಿಬ್ಬಂದಿಗಳಿದ್ದರು.