ಕ್ಷಯರೋಗ ಲಕ್ಷಣ ಇರುವವರು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಬೇಗ ಗುಣಮುಖರಾಗಬಹುದು
ಹೊಸಪೇಟೆ: ಸಮಾಜದಲ್ಲಿ ಕ್ಷಯ ರೋಗಕ್ಕೆ ತುತ್ತಾಗಿರುವ ಹಾಗೂ ಆಸ್ಪತ್ರೆಗೆ ಬಾರದೇ ಇರುವ ಕ್ಷಯರೋಗಿಗಳನ್ನು ಮನೆಮನೆಗೆ ತೆರಳಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಹೇಳಿದರು.
ನಗರದ ಆಕಾಶವಾಣಿ ವ್ಯಾಪ್ತಿಯ 35ನೇ ವಾರ್ಡ್ ನಲ್ಲಿ ಬುಧವಾರ ತಾಲೂಕು ಆರೋಗ್ಯ ಕೇಂದ್ರದಿಂದ ಆಯೋಜಿಸಲಾಗಿದ್ದ ಕ್ಷಯರೋಗದ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಳೆ ಕ್ಷಯರೋಗಿಗಳು, ಕ್ಷಯರೋಗ ಸಂಪರ್ಕದಲ್ಲಿ ಇರುವವರು, ಮೆದುಮೇಹ ಇರುವವರು, ಧೂಮಪಾನ ಮತ್ತು ಮಧ್ಯಪಾನ ಮಾಡುವವರು, ಕ್ಯಾನ್ಸರ್, ದೀರ್ಘಕಾಲ ಕಾಯಿಲೆ ಇರುವವರು ಹಾಗೂ ಕ್ಷಯರೋಗ ಲಕ್ಷಣ ಇರುವವರು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಬೇಗ ಗುಣಮುಖರಾಗಬಹುದು ಎಂದು ತಿಳಿಸಿದರು.
ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ದೇಹದ ತೂಕ ಕಡಿಮೆಯಾಗುವುದು ಹಾಗೂ ಕಂಕುಳಿನಲ್ಲಿ ಗಡ್ಡೆ ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದರು.ಕ್ಷಯರೋಗವು ಸೋಂಕಿನ ಮೂಲಕ ಹರಡುವ ಕಾಯಿಲೆಯಾಗಿದ್ದು, ಕ್ಷಯರೋಗದಿಂದ ಬಳಲುತ್ತಿರುವವರು ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಸೂಕ್ಷ್ಮಾಣು ಗಾಳಿಯ ಮೂಲಕ ಇತರರ ದೇಹಕ್ಕೆ ಸೇರಿ ಸೋಂಕು ಉಂಟು ಮಾಡಬಹುದು. ಆದ್ದರಿಂದ ರೋಗದ ಲಕ್ಷಣ ಕಂಡುಬಂದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕ್ಷಯರೋಗ ಮೇಲ್ವಿಚಾರಕ ಕಾಸಿಂ ಸಾಬ್, ಎಚ್ ಐಓ ಯಶೋದಾ, ಪಿಎಚ್ ಸಿ ಓ ಉಮಾ, ಗುಲ್ನಾಜ್ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಾರ್ಡ್ನ ಮುಖಂಡರು ಇದ್ದರು.