ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾದ್ಯಂತ ಏ.1 ರಿಂದ ರಾಷ್ಟ್ರೀಯ ಜನಗಣತಿಯ ಮೊದಲ ಹಂತದ ಸ್ವಯಂ ಜನಗಣತಿ ಕಾರ್ಯಾರಂಭವಾಗಿದ್ದು, ಏ.15 ರೊಳಗಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬದವರ ಸ್ವಯಂ ಗಣತಿಗೊಳಪಡಿಸುವ ಮೂಲಕ ಜನಗಣತಿ ಕಾರ್ಯ ಯಶಸ್ವಿಗೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸಾರ್ವಜನಿಕರಿಗೆ ಮನವಿ ಮಾಡಿದರು.ರಾಷ್ಟ್ರೀಯ ಜನಗಣತಿ 2027ರ ಮೊದಲ ಹಂತದ ಸ್ವಯಂ ಗಣತಿ ಕುರಿತು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಯಂ ಗಣತಿ ಅತ್ಯಂತ ಸರಳವಾಗಿದ್ದು, ಕೇವಲ 5 ನಿಮಿಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಈಗಾಗಲೇ ನಾನು ಆ ಕಾರ್ಯ ಪೂರ್ಣಗೊಳಿಸಿದ್ದಾಗಿ ತಿಳಿಸಿದರು. ದೇಶದ ಮಹತ್ವಾಕಾಂಕ್ಷಿಯ ಜನಗಣತಿ ಪ್ರಕ್ರಿಯೆ ಏ.1ರಿಂದ ಆರಂಭಗೊಂಡಿದ್ದು, ಜನಗಣತಿ ದೇಶದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಕಾರ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡುವ ಮೂಲಕ ಸಹಕರಿಸಿಬೇಕು. ಏ.15ರವರೆಗೆ ಸ್ವಯಂ ವಿವರ ದಾಖಲಿಸಲು ಅವಕಾಶವಿದೆ ಎಂದರು.ಸಾರ್ವಜನಿಕರು ಮಾಡಬೇಕಾದುದು ಇಷ್ಟೆ:
ಜನಗಣತಿಯ ವೆಬ್ ಪೋರ್ಟಲ್: https://se.census.gov.in ಗೆ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ ಬಳಿಕ ನಿಮ್ಮ ಸ್ಥಳ ಆಯ್ಕೆ ಮಾಡಿ, ನಕ್ಷೆಯಲ್ಲಿ ನಿಮ್ಮ ಮನೆ ಗುರುತಿಸಿ, ಬಳಿಕ ಮನೆಯ ಇಲ್ಲವೇ ಕುಟುಂಬದ ವಿವರ ಭರ್ತಿ ಮಾಡಿ, ನಿಮ್ಮ SE Reference ID ಪಡೆಯಿರಿ. ಈಗ ಬಂದಿರುವ ನಿಮ್ಮ ಎಸ್‌ಇ ಐಡಿ ಅನ್ನು ಸುರಕ್ಷಿತವಾಗಿ ಇಟ್ಟು, ಗಣತಿದಾರರು ಮನೆಗೆ ಬಂದಾಗ ಅದನ್ನು ಅವರೊಂದಿಗೆ ಹಂಚಿಕೊಂಡರೆ ನೀವು ಜನಗಣತಿ ಕಾರ್ಯಕ್ಕೆ ಕೈಜೋಡಿಸಿದಂತಾಗುವುದು ಎಂದರು.ಕ್ಷೇತ್ರ ಪರಿಶೀಲನೆ: ಏ.16 ರಿಂದ ಮೇ 15 ರವರೆಗಿನ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಅವರು ನಿಮ್ಮಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಅವಧಿಯಲ್ಲಿ ಶೇ.100ರಷ್ಟು ಗೌಪ್ಯತೆ ಇಟ್ಟು ನಿಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಅಧಿಕಾರಿಗಳಿಗೆ ಸೂಚನೆ: ಪ್ರತಿ ಇಲಾಖೆಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಯ ಸ್ವಯಂ ಗಣತಿ ಪೂರ್ಣಗೊಳಿಸಿ ಎನ್ಯೂಮರೇಶನ್ ಮಾಡಿಬೇಕು. ತಮ್ಮ ತಮ್ಮ ಕಚೇರಿಗಳಲ್ಲಿ ಎಷ್ಟು ಸಿಬ್ಬಂದಿ ಸ್ವಯಂ ಗಣತಿ ಮಾಡಿಸಿದ್ದೀರಿ ಎಂಬ ವರದಿಯನ್ನು ಜಿಲ್ಲಾಡಾಳಿತಕ್ಕೆ ತಕ್ಷಣ ಸಲ್ಲಿಸುವ ಮೂಲಕ ಜನಗಣತಿ ಯಶಸ್ವಿಗೊಳಿಸಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜನಗಣತಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸುವುದು ಕಡ್ಡಾಯವಾಗಿದೆ. ಹಾಗಾಗಿ ಪ್ರತಿ ತಾಲೂಕಿನಿಂದ ಯಾರೂ ಜನಗಣತಿಯಿಂದ ಹೊರಗುಳಿಯದಂತೆ ತಾಲೂಕು ಮಟ್ಟದ ಅಧಿಕಾರಿಗಳು ನೋಡಿಕೊಳ್ಳಬೇಕು. ಇನ್ನೊಂದೆಡೆ ಅತೀ ದೊಡ್ಡ ಇಲಾಖೆಯ ಖ್ಯಾತಿಯ ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯವರು ಜನಗಣತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಬಿಟ್ಟು ಹೋಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಸ್ವಸಹಾಯ ಗುಂಪಿನವರು, ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಯಡಿ ಕೆಲಸಮಾಡುವ ಪೌರ ಕಾರ್ಮಿಕರು ಜನಗಣತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಮೂಲಕ ಅವರನ್ನೆಲ್ಲ ಸ್ವಯಂ ಗಣತಿಗೆ ಒಳಪಡಿಸಬೇಕು ಎಂದು ಆಯಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಪ್ರತ್ಯೇಕ ಸಭೆಗೆ ಸೂಚನೆ: ಈ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಡ್ಡಾಯವಾಗಿ ಸ್ವಯಂ ಗಣತಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಿಲ್ಲೆಯ ಪ್ರತಿ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಸ್ವಯಂ ಗಣತಿ ಮಾಡಿಸಿಕೊಳ್ಳಲು ಸೂಚಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ಇದಕ್ಕೆ ಸಮಯ ಬಹಳೇನಿಲ್ಲ. ಕೇವಲ 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಿಬ್ಬಂದಿಗೆ ತರಬೇತುಗೊಳಿಸಲಾಗಿದೆ. ಆ ತರಬೇತಿದಾರರಿಗೆ ಶೀಘ್ರದಲ್ಲಿ ಗುರುತಿನ ಚೀಟಿ ನೀಡಲಾಗುವುದು ಎಂದ ಅವರು, 600 ರಿಂದ 800 ಜನರಿಗೆ ಸಾಕಾಗುವಷ್ಟು ಸಿಬ್ಬಂದಿ ನಿಯೋಜಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಇಂಡಿ, ವಿಜಯಪುರ ಉಪ ವಿಭಾಗಾಧಿಕಾರಿಗಳು, ಎಲ್ಲ ತಾಲೂಕಿನ ತಹಸೀಲ್ದಾರರು, ಬಿಇಒ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.