ತಾವು ಕಲಿತ ಶಾಲೆ ಮುಚ್ಚಿರುವುದನ್ನು ಗಮನಿಸಿದ ಶಾಸಕರು, ತನ್ನ ಒಡೆತನದ ಖಾಸಗಿ ಶಾಲೆಯನ್ನೇ ಮುಚ್ಚಿ ಸರ್ಕಾರಿ ಶಾಲೆ ಬಲವರ್ಧನೆಗೆ ಕಾರಣಕರ್ತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಶಾಲೆಗಳು ಉಳಿದು ಬಲವರ್ಧನೆಗೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಶಿಕ್ಷಕರು ಮತ್ತು ಪೋಷಕರು ಒಗ್ಗೂಡಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ಸ್ವಗ್ರಾಮ ಹರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದು ನನ್ನೂರಿನ ಇದೇ ಶಾಲೆಯಲ್ಲಿ. ಒಂದು ಕಾಲದಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆ ಒಂದೊಮ್ಮೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿಹೋಗಿತ್ತು ಎಂದರು.

ಮುಚ್ಚಿದ ಶಾಲೆಯನ್ನು ಮರು ಆರಂಭಿಸಿ ಐದಾರು ತಿಂಗಳಲ್ಲಿಯೇ ಇತರೆ ಶಾಲೆಗಳಿಗೆ ಸವಾಲೆಸೆಯುವಂತೆ ಪ್ರಗತಿ ಸಾಧಿಸಲಾಗಿದೆ. ಇದು ಸುಲಭದ ಮಾತಲ್ಲ. ಇದಕ್ಕೆ ಕಾರಣಕರ್ತರಾದ ಶಿಕ್ಷಕರು ಮತ್ತು ಪೋಷಕರು ಅಭಿನಂದನಾರ್ಹರು ಎಂದು ತಿಳಿಸಿದರು.

ಹರಳಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪೋಷಕರು ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ವು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಮುಂದಿನ ದಿನಗಳಲ್ಲಿ ಇಲ್ಲಿ ಮಕ್ಕಳ ಮನೆಯನ್ನು ತೆರೆಯಲಾಗುವುದು. ಅಗತ್ಯ ಇದ್ದರೆ ಇಂಗ್ಲಿಷ್ ಮಾಧ್ಯಮವನ್ನು ತೆರೆಯೋಣ. ನಿಮ್ಮೆಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಕೋರಿದರು.

ನನ್ನ ಶಾಲೆ ಅಭಿವೃದ್ಧಿಗಾಗಿ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ. ಅಗತ್ಯವಿರುವ ಎಲ್ಲಾ ಭೌತಿಕ ಹಾಗೂ ಮೂಲ ಸೌಲಭ್ಯಗಳನ್ನೂ ಒದಗಿಸುತ್ತೇನೆ. ಇಲ್ಲಿ ಉತ್ತಮ ಶಿಕ್ಷಕರಿದ್ದು, ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುತ್ತಿದ್ದಾರೆ. ಪೋಷಕರು ಸಹಕಾರ, ಬೆಂಬಲ ನೀಡಿದರೆ ಸರ್ಕಾರಿ ಶಾಲೆ ಅಭಿವೃದ್ಧಿಯಾಗುತ್ತವೆ ಎಂಬುದಕ್ಕೆ ನಮ್ಮ ಶಾಲೆಯೇ ಉತ್ತಮ ನಿದರ್ಶನ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮಾತನಾಡಿ, ತಾವು ಕಲಿತ ಶಾಲೆ ಮುಚ್ಚಿರುವುದನ್ನು ಗಮನಿಸಿದ ಶಾಸಕರು, ತನ್ನ ಒಡೆತನದ ಖಾಸಗಿ ಶಾಲೆಯನ್ನೇ ಮುಚ್ಚಿ ಸರ್ಕಾರಿ ಶಾಲೆ ಬಲವರ್ಧನೆಗೆ ಕಾರಣಕರ್ತರಾಗಿದ್ದಾರೆ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಾಸಕರು ವಹಿಸಿದ್ದ ವಿಶೇಷ ಆಸಕ್ತಿಯ ಫಲವಾಗಿ ಇಲ್ಲಿನ ಶಾಲೆ ಮಕ್ಕಳು ಬಹಳ ಉತ್ತಮವಾಗಿ ಕಲಿಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ದೇವರಾಜು. ಬಿಸಿಎಂ ಅಧಿಕಾರಿ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದ್ ಕುಮಾರ್, ನಿರ್ದೇಶಕ ಎಸ್.ಆರ್.ನಂಜೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜು. ಪಿಡಿಒ ಬಸವಶೆಟ್ಟಿ, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಶಿಕ್ಷಣ ಸಂಯೋಜಕ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಸೇರಿದಂತೆ ಹಲವರಿದ್ದರು.