ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಮಹಾನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಅಪಾರವಾಗಿದ್ದು, ಸಾರ್ವಜನಿಕರು ಸಹ ಎಲ್ಲೆಂದರಲ್ಲಿ ಕಸ ಎಸೆಯದೇ ಮನೆ ಬಾಗಿಲಿಗೆ ಬರುವ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕರೆ ನೀಡಿದ್ದಾರೆ.ತಾಲೂಕಿನ ಆವರಗೊಳ್ಳ ಗ್ರಾಮದ ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ₹21.92 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ಘನತ್ಯಾಜ್ಯ ಸಂಸ್ಕರಣೆ ಪ್ರೊಸೆಸಿಂಗ್ ಶೆಡ್, ಕಾಂಕ್ರೀಟ್ ರಸ್ತೆ, ಚರಂಡಿ, ಸ್ಯಾನಟರಿ ಲ್ಯಾಂಡ್ ಫಿಲ್ ಹಾಗೂ ಇತರೆ ಸಿವಿಲ್ ಕಾಮಗಾರಿ, ಸೆಗ್ರಿಗೇಷನ್, ಬೇಲಿಂಗ್ ಯಂತ್ರೋಪಕರಣ ಒಳಗೊಂಡ ವಿಂಡ್ರೋ ಕಾಂಪೋಸ್ಟಿಂಗ್ ಘಟಕ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ಖರೀದಿಸಲಾದ ಆಟೋ ಟಿಪ್ಪರ್, ಟ್ರ್ಯಾಕ್ಟರ್, ಸಕ್ಷನ್ ಯಂತ್ರಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ನಿತ್ಯವೂ ಅಪಾರ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಮನೆ, ಅಂಗಡಿ, ಹೋಟೆಲ್ ಮುಂದೆ ಹೋಗಿ ಕಸ ಸಂಗ್ರಹಿಸಿದರೆ, ಎಲ್ಲೆಂದರಲ್ಲಿ, ಖಾಲಿ ನಿವೇಶನ, ರಸ್ತೆಗಳ ಬದಿ, ನಿರ್ಜನ ಪ್ರದೇಶದಲ್ಲಿ ಕಸ ಸುರಿಯುತ್ತಿರುವುದು ಕಡಿಮೆಯಾಗಿಲ್ಲ. ಇನ್ನಾದರೂ ಸ್ವಚ್ಛತೆ ಕಾಪಾಡಲು ಪಾಲಿಕೆ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ಮನೆ ಅಂಗಳಕ್ಕೆ ಬರುವ ಕಸ ಸಂಗ್ರಹಣ ವಾಹನಗಳು ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದು, ಜನರೂ ಅದನ್ನು ಪಾಲಿಸಬೇಕು ಎಂದು ತಿಳಿಸಿದರು.ಹಸಿ ಮತ್ತು ಒಣಕಸ, ಅಪಾಯಕಾರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ದಯವಿಟ್ಟು ಯಾರೂ ಸಹ ಬಿಸಾಡಬಾರದು. ಸ್ವಚ್ಛತೆ ಪಾಲಿಕೆಯದ್ದಷ್ಟೇ ಅಲ್ಲ, ನಮ್ಮ ಕರ್ತವ್ಯ ಎಂಬ ಸಂಗತಿ ಎಲ್ಲರೂ ಅರಿಯಬೇಕು. ಪಾಲಿಕೆ ಸಿಬ್ಬಂದಿ, ಕಸ ಸಂಗ್ರಹ ವಾಹನ ಬಂದಾಗ ಹಸಿ, ಒಣ ಕಸ, ಅಪಾಯಕಾರಿ ತ್ಯಾಜ್ಯಗಳನ್ನು ವಿಂಗಡಿಸಿ, ಪ್ರತ್ಯೇಕವಾಗಿ ನೀಡಬೇಕು. ಪಾಲಿಕೆ ಕಾರ್ಮಿಕರು, ಕಸ ಸಂಗ್ರಹ ವಾಹನ ಚಾಲಕರು, ಸಿಬ್ಬಂದಿ ಸಹ ತಮ್ಮ ಕರ್ತವ್ಯ ಪಾಲಿಸುವ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಮಹಾನಗರದ ತ್ಯಾಜ್ಯ ಸಂಸ್ಕರಣೆಗಾಗಿ ಉತ್ತಮ ಸಂಸ್ಕರಣಾ ಘಟಕ ಇಲ್ಲಿ ನಿರ್ಮಿಸಲಾಗಿದೆ. ಎನ್‌ಜಿಟಿ ಆದೇಶದಂತೆ ಮಹಾನಗರದಲ್ಲಿ ಉತ್ಪತ್ತಿಯಾಗುವ ಪೂರ್ಣ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಗೊಬ್ಬರವಾಗಿ ಪರಿವರ್ತಿಸುವುದರಿಂದ ಉತ್ತಮ ಗೊಬ್ಬರ ಸಿಗಲಿದೆ. ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಉತ್ತಮ ಸಹಕಾರ ನೀಡಿರುವ ಆವರಗೊಳ್ಳ ಗ್ರಾಮಸ್ಥರು, ಸ್ಥಳೀಯ ರೈತರ ಸಹಕಾರ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.ಕಸ ನಿರ್ವಹಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿ, ಮಹಾನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹ ಸ್ಪಂದಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು, ಖಾಲಿ ನಿವೇಶನ, ರಸ್ತೆ, ನಿರ್ಜನ ಪ್ರದೇಶಗಳಲ್ಲಿ ಕಸ ಎಸೆಯುವುದು ನಿಲ್ಲಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವಂತೆ ಪಾಲಿಕೆ ಸಿಬ್ಬಂದಿ ಸಹ ಜಾಗೃತಿಮೂಡಿಸಬೇಕು. ಜನರು ಸಹ ಸ್ವಚ್ಛತೆ ಕಾಪಾಡಲು ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಉದಯಕುಮಾರ, ಮೀನಾಕ್ಷಿ ಜಗದೀಶ, ಅಬ್ದುಲ್ ಲತೀಫ್, ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ, ಸುಧಾ ಮಂಜುನಾಥ ಇಟ್ಟಿಗುಡಿ, ಆಯುಕ್ತರಾದ ರೇಣುಕಾ, ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂದಿ, ಆವರಗೊಳ್ಳ ಗ್ರಾಮಸ್ಥರು ಇದ್ದರು.ಇದೇ ವೇಳೆ ಆವರಗೊಳ್ಳ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೇ 2024ರಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ಬೆಳೆ ಹಾನಿಗೆ ಒಳಗಾದ ರೈತರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರಿಹಾರ ವಿತರಿಸಿದರು.