ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಲಾಖೆಯೊಂದಿಗೆ ಕೈಜೋಡಿಸಿ

| Published : Jul 04 2024, 01:09 AM IST

ಸಾರಾಂಶ

ವರ್ಷವೊಂದರಲ್ಲಿ 365 ದಿನವೂ ರಾತ್ರಿ ಹಗಲು ಎನ್ನದೇ ಬಾಗಿಲು ಹಾಕದೇ ಸೇವೆ ಮಾಡುತ್ತಿರುವ ಇಲಾಖೆಯೆಂದರೆ ಅದು ಪೊಲೀಸ್ ಇಲಾಖೆ ಮಾತ್ರ. ಇಂತಹ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ತಿಳಿಸಿದರು.

- ಜನಸಂಪರ್ಕ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ ಮನವಿ | ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ

ಕನ್ನಡಪ್ರಭ ವಾರ್ತೆ ನ್ಯಾಮತಿ

ವರ್ಷವೊಂದರಲ್ಲಿ 365 ದಿನವೂ ರಾತ್ರಿ ಹಗಲು ಎನ್ನದೇ ಬಾಗಿಲು ಹಾಕದೇ ಸೇವೆ ಮಾಡುತ್ತಿರುವ ಇಲಾಖೆಯೆಂದರೆ ಅದು ಪೊಲೀಸ್ ಇಲಾಖೆ ಮಾತ್ರ. ಇಂತಹ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ತಿಳಿಸಿದರು.ಪಟ್ಟಣದ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್, ಚನ್ನಗಿರಿ ಉಪವಿಭಾಗ, ನ್ಯಾಮತಿ ಪೊಲೀಸ್ ಠಾಣೆ ಆಶ್ರಯದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡರು. ಹಿಂದೆ ಪಟ್ಟಣದಲ್ಲಿ ಸಿಸಿ ರಸ್ತೆಗಳಿದ್ದವು. ಅವುಗಳೆಲ್ಲಾ ಈಗ ಹಾಳಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಶಾಲಾ ಕಾಲೇಜು, ಹಾಗೂ ಆರೋಗ್ಯ ಕೇಂದ್ರದ ಬಳಿ ರಸ್ತೆಗಳಿಗೆ ಹಮ್ಸ್ ಹಾಕುವಂತೆ ಒತ್ತಾಯಿಸಿದರು.ಸವಳಂಗ ವೈನ್ ಶಾಪ್ ಬಳಿ ನಿತ್ಯ ಗಲಾಟೆ, ಓಸಿ ದಂಧೆ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಹಾವಳಿಗೆ ಕಡಿವಾಣ ಹಾಕುವುದು, ಸರ್ಕಾರಿ ಶಾಲಾ ಕಾಲೇಜು ಆವರಣಗಳಲ್ಲಿ ಮತ್ತು ಜಮೀನುಗಳಲ್ಲಿ ರಾತ್ರಿ ಮದ್ಯಪಾನ ಮಾಡಿ ಗಲಾಟೆ ಮಾಡುವುದು ಈಗ ವಿಪರೀತವಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದರು.ಆಟೋಗಳಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗಲಾಗುತ್ತದೆ. ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಹಿಂಸೆಯಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಹೋಗಿ ಬರುವ ಸಮಯದಲ್ಲಿ ಪುಂಡ ಪೋಕರಿಗಳು ಬೈಕುಗಳಲ್ಲಿ ಕರ್ಕಶ ಹಾರ್ನ್ ಮಾಡುತ್ತಾ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಹೆಚ್ಚಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಫಲವನಹಳ್ಳಿ, ಮುಸ್ಸೆನಾಳ್, ಕುಂಕುವ ಇತರೆ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿವೆ. ಸಾಕು ಪ್ರಾಣಿಗಳ ಮೇಲೆ ದಿನನಿತ್ಯ ದಾಳಿಗಳು ಆಗುತ್ತಿವೆ. ಕೆಲವು ರೈತರು ತಾವು ಸಾಕಿದ ಪ್ರಾಣಿಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ. ಕಾಡು ಪ್ರಾಣಿಗಳನ್ನು ಎದುರಿಸಲು ಬಂದೂಕು ತರಬೇತಿ ನೀಡಿ, ಬಂದೂಕಿಗೆ ಪರವಾನಿಗೆ ನೀಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವರಾಂನಾಯ್ಕ ಮನವಿ ಮಾಡಿದರು.ನ್ಯಾಮತಿ ಠಾಣೆಯ ಸಿಪಿಐ ಎನ್.ಎನ್.ರವಿ ಮಾತನಾಡಿದರು. ಪಿಎಸ್ಐ ಜಯಪ್ಪನಾಯ್ಕ, ಸಿಬ್ಬಂದಿಗಳಾದ ಕೆ.ಮಂಜಪ್ಪ ಹೊನ್ನಾಳಿ, ಚಂದ್ರಶೇಖರ್, ತಿಮ್ಮರಾಜು, ಮಂಜುಳಾ, ಮಹೇಶನಾಯ್ಕ, ಕವಿತಾಬಾಯಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ್ ಚಂದ್ರಶೇಖರ್, ಜೋಗದ ಹಂಪಣ್ಣ, ಗುಂಡೂರು ಲೋಕೇಶ್, ಗಂಗಾಧರ್ ಸೇರಿದಂತೆ ಮತ್ತಿತರರಿದ್ದರು.

----

ಪಟ್ಟಣದ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್, ಚನ್ನಗಿರಿ ಉಪವಿಭಾಗ ಹಾಗೂ ನ್ಯಾಮತಿ ಪೊಲೀಸ್ ಠಾಣೆ ಆಶ್ರಯದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.