ಕನ್ನಡ ಶಾಲೆಗಳ ಉಳಿವು ಆಂದೋಲನಕ್ಕೆ ಕೈಜೋಡಿಸಿ

| Published : Jul 25 2024, 01:21 AM IST

ಸಾರಾಂಶ

ಚನ್ನಪಟ್ಟಣ: ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ಕೈ ಜೋಡಿಸಿ ಸರ್ಕಾರಿ ಕನ್ನಡ ಶಾಲೆ ದತ್ತು ಪಡೆದು ಜೀರ್ಣೋದ್ಧಾರ ಮಾಡಿರುವ ಡಾ.ಚಿಕ್ಕಕೊಮಾರಿಗೌಡರ ಸೇವೆ ಶ್ಲಾಘನೀಯ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜೇಗೌಡ ತಿಳಿಸಿದರು.

ಚನ್ನಪಟ್ಟಣ: ಕನ್ನಡ ಶಾಲೆಗಳು ಉಳಿದರೆ ಮಾತ್ರ ನಾಡಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಆಂದೋಲನಕ್ಕೆ ಕೈ ಜೋಡಿಸಿ ಸರ್ಕಾರಿ ಕನ್ನಡ ಶಾಲೆ ದತ್ತು ಪಡೆದು ಜೀರ್ಣೋದ್ಧಾರ ಮಾಡಿರುವ ಡಾ.ಚಿಕ್ಕಕೊಮಾರಿಗೌಡರ ಸೇವೆ ಶ್ಲಾಘನೀಯ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜೇಗೌಡ ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆರಂಭಿಸಿರುವ ‘ಸರ್ಕಾರಿ ಕನ್ನಡ ಶಾಲೆಗಳು ಉಳಿಯಲಿ’ ಎಂಬ ಆಂದೋಲನಕ್ಕೆ ಕೈ ಜೋಡಿಸಿ ಬಿಇಒ ಕಚೇರಿ ಪಕ್ಕದ ಸರ್ಕಾರಿ ಶಾಲೆ ದತ್ತು ಪಡೆದಿರುವ ಚಿಕ್ಕಕೊಮಾರಿಗೌಡರಿಗೆ ಅಭಿನಂದನೆ ಮತ್ತು ಬಿಇಒ ಕಚೇರಿ ಮೇಲೆ ನಿರ್ಮಿಸಿರುವ ಡಾ.ಸಿ.ಕೆ.ಎನ್.ಸಭಾಂಗಣ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಶಿಕ್ಷಕರು ಸಭೆ ಮಾಡಲು ಒಂದು ವೇದಿಕೆ ಬೇಕಿತ್ತು. ಚಿಕ್ಕಕೊಮಾರಿಗೌಡರು ಇಳಿವಯಸ್ಸಿನಲ್ಲೂ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಜೀರ್ಣೋದ್ಧಾರ ಮಾಡಿದ್ದಾರೆ. ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ದಾನಿಗಳು, ಉಳ್ಳವರನ್ನು ಸಂಪರ್ಕಿಸಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಲು ಪ್ರೇರೇಪಣೆ ಮಾಡುತ್ತಿರುವುದು ಒಂದು ದೊಡ್ಡ ಸಾಧನೆ. ಇವರಿಬ್ಬರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.

ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕನ್ನಡ ಶಾಲೆಗಳ ಉಳಿಕೆ ಆಂದೋಲನಕ್ಕೆ ಚಿಕ್ಕಕೊಮಾರಿಗೌಡರು ಹಾಗೂ ಕುಟುಂಬ ಸಹಕಾರ ನೀಡಿದೆ. ಬಿಇಒ ಮರೀಗೌಡರು ಸಂಘ-ಸಂಸ್ಥೆಗಳ ನೆರವಿನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿರುವುದು ಇತರರಿಗೂ ಮಾದರಿ ಎಂದರು.

ಚಿಕ್ಕಕೊಮಾರಿಗೌಡ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಎಲ್ಲವನ್ನು ಸರ್ಕಾರವೇ ಮಾಡಲಾಗುವುದಿಲ್ಲ, ಉಳ್ಳವರು ಸರ್ಕಾರಿ ಶಾಲೆ ಉಳಿಸಲು ನೆರವಾಗಬೇಕು ಎಂದರು.

ಇದೇ ವೇಳೆ ದಾನಿ ಡಾ.ಕೊಮಾರಿಗೌಡ ಹಾಗೂ ಬಿಇಒ ಮರೀಗೌಡರನ್ನು ಸನ್ಮಾನಿಸಲಾಯಿತು.

ಸಾಹಿತಿ ವಿಜಯ್ ರಾಂಪುರ, ಆರ್ಟ್ ಆಫ್ ಲಿವಿಂಗ್‌ನ ರವಿಕುಮಾರ್‌ಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಮೋಹನ್, ಸಾಂತ್ವನ ಸಂಗೀತ ಫೌಂಡೇಷನ್‌ನ ಸಂಸ್ಥಾಪಕಿ ಪವಿತ್ರಾ, ಪ್ರಭಾಕರ್ ರೆಡ್ಡಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ನಗರಸಭಾ ಸದಸ್ಯರಾದ ವಾಸಿಲ್ ಅಲಿ ಖಾನ್, ಸುಮಾ ರವೀಶ್, ಕಮಲಾರಾಮು, ಮಂಗಳಮ್ಮ, ಮಧ್ಯಾಹ್ನದ ಬಿಸಿಯೂಟದ ಜಿಲ್ಲಾ ಸಹಾಯಕ ಶಂಕರೇಗೌಡ, ನಿವೃತ್ತ ಪ್ರಾಂಶುಪಾಲ ನಿಂಗೇಗೌಡ ಇತರರಿದ್ದರು.

ಪೊಟೋ: ೨೨ಸಿಪಿಟಿ೨

ಚನ್ನಪಟ್ಟಣದ ಬಿಇಒ ಕಚೇರಿ ಮೇಲೆ ನಿರ್ಮಾಣ ಮಾಡಿರುವ ಡಾ.ಸಿ.ಕೆ.ಎನ್. ಸಭಾಂಗಣದ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ರಮೇಶ್‌ಗೌಡ ಮಾತನಾಡಿದರು.