ಸಾರಾಂಶ
ಬೆಂಗಳೂರು : ನಗರದಲ್ಲಿ ಕಳಪೆ ಹೆಲ್ಮೆಟ್ ಮಾರಾಟಗಾರರಿಗೆ ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಮತ್ತು ಕಾನೂನು ಮಾಪನಾ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ನಗರದ ಸಿದ್ದಯ್ಯ ರಸ್ತೆ, ಕಲಾಸಿಪಾಳ್ಯ, ಲಾಲ್‌ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ ಹಾಗೂ ನಾಗರಬಾವಿ ಹೊರ ವರ್ತುಲ ರಸ್ತೆಗಳಲ್ಲಿ ಶುಕ್ರವಾರ ಈ ಜಂಟಿ ಕಾರ್ಯಾಚರಣೆ ನಡೆದಿದೆ.
ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಸವಾರರು ಮತ್ತು ಹಿಂಬದಿ ಸವಾರರ ಸಾವಿಗೆ ಕಳಪೆ ಹೆಲ್ಮೆಟ್ ಬಳಕೆ ಸಹ ಪ್ರಮುಖ ಕಾರಣಗಳಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಹಾಫ್ ಹೆಲ್ಮೆಟ್ ಹಾಗೂ ಗುಣಮಟ್ಟವಿಲ್ಲದ ಹೆಲ್ಮೆಟ್ ಮಾರಾಟ ಮಾಡದಂತೆ ಸಹ ವ್ಯಾಪಾರಿಗಳಿಗೆ ಸೂಚಿಸಲಾಗಿದೆ. ಹೀಗಿದ್ದರೂ ಕೆಲವರು ಕಳಪೆ ಹೆಲ್ಮೆಟ್ ಮಾರುತ್ತಿದ್ದಾರೆ ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.
ತಮ್ಮ ಸುರಕ್ಷತೆ ಸಲುವಾಗಿ ಗುಣಮಟ್ಟದ ಹೆಲ್ಮೆಟ್ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದೇವೆ. ಹೆಲ್ಮೆಟ್ ಮಹತ್ವದ ಕುರಿತು ಜಾಗೃತಿ ಸಹ ಮೂಡಿಸಲಾಗಿದೆ. ಹೀಗಿದ್ದರೂ ಜನರು ಹೆಚ್ಚು ಕಳಪೆ ಹೆಲ್ಮೆಟ್ ಬಳಸುತ್ತಿದ್ದಾರೆ ಎಂದು ಡಿಸಿಪಿ ಬೇಸರ ವ್ಯಕ್ತಪಡಿಸಿದರು.
ಈ ಕಳಪೆ ಹೆಲ್ಮೆಟ್ ಮಾರಾಟ ಹಿನ್ನೆಲೆಯಲ್ಲಿ ನಗರದ 19 ಕಡೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿದ್ದೇವೆ. ಈ ವೇಳೆ 19 ಅಂಗಡಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, 38 ಅಂಗಡಿಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಮಾಹಿತಿ ನೀಡಿದರು.