ಕೋತೂರಿನಲ್ಲಿ ಜೆಡಿಎಸ್-ಬಿಜೆಪಿ ಜಂಟಿ ಸಂಭ್ರಮಾಚರಣೆ

| Published : Jun 11 2024, 01:33 AM IST

ಸಾರಾಂಶ

ಕಾನೂರು ಕೋತೂರು ಮುಖ್ಯ ರಸ್ತೆಯಲ್ಲಿ ಪ್ರಮುಖರು, ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ನರೇಂದ್ರ ಮೋದಿ 3ನೇ ಬಾರಿಗೆ ದೇಶದ ಪ್ರಧಾನಿಯಾದ ಹಿನ್ನೆಲೆಯಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೇಂದ್ರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕಾರಣಕ್ಕಾಗಿ ಕೋತೂರಿನಲ್ಲಿ ಜೆಡಿಎಸ್ -ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಸಂಭ್ರಮಾಚರಿಸಿದರು. ಕಾನೂರು- ಕೋತೂರು ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜಯಘೋಷಗಳನ್ನು ಹಾಕುತ್ತಾ ಪಟಾಕಿಯನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಮುಖಂಡ ಹಾಗೂ ಎಚ್. ಡಿ. ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೆ.ಆರ್ ಸುರೇಶ್ ಮಾತನಾಡಿ, ದೇಶದ ಪ್ರಧಾನಿಯಾಗಿ 3ನೇ ಬಾರಿಗೆ ಆಯ್ಕೆಯಾದ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ನಮ್ಮ ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸಲಿದ್ದಾರೆ. ಮೋದಿ ಅವರ ನಾಯಕತ್ವ ರಾಷ್ಟ್ರದ ಘನತೆಯನ್ನೇ ಬದಲಿಸಲಿದೆ ಎಂದು ಹೇಳಿದರಲ್ಲದೆ, ಎಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ಅವರ ರಾಜಕೀಯ ಬದುಕಿನ ಮತ್ತೊಂದು ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ಇದು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಭ್ರಮಾಚರಣೆಯಲ್ಲಿ ಕಾನೂರು ಬಿಜೆಪಿ ಮುಖಂಡರಾದ ಎಸ್. ಎಂ.ಬಸಪ್ಪ, ಈಶ, ಸಚಿನ್, ಪವನ್, ಜೆಡಿಎಸ್ ಮುಖಂಡರಾದ ಕೆ.ಆರ್.ಸತೀಶ್, ಪರಮೇಶ್, ಈಶ್ವರ, ಸಂಪತ್ ತನೇಶ್, ಮಂಜುನಾಥ್, ಜೀವನ್, ಉಲ್ಲಾಸ್, ಪವಿ, ರಘು, ಬಸವರಾಜು, ಉಮೇಶ್, ಜನಕ, ಗಣೇಶ್ ಮೊದಲಾದವರು ಹಾಜರಿದ್ದರು.