ಸಾರಾಂಶ
ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕದಿಂದ ಧರಣಿ । ಮೂಲಭೂತ ಸೌಕರ್ಯ ಕೊರತೆ । ಅಧಿಕಾರಿಗಳಿಂದ ಉಡಾಫೆ ವರ್ತನೆ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕೊರತೆ ಹಾಗೂ ಅಧಿಕಾರಿಗಳು ಉಡಾಫೆ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ತಾಲೂಕು ಅಧ್ಯಕ್ಷ ಭೋಜೇಗೌಡ ಅವರ ನೇತೃತ್ವದಲ್ಲಿ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಭೋಜೇಗೌಡ, ‘ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕುಗಳಿಗೆ ಹಾಗೂ ಇನ್ನಿತರ ಕೆಲಸಗಳಿಗೆ ತೆರಳುತ್ತಾರೆ. ಕೆಲವೊಮ್ಮೆ ಬಸ್ ಬಗ್ಗೆ ಮಾಹಿತಿ ಕೇಳಲು ಹೋದರೆ ಇಲ್ಲಿನ ಅಧಿಕಾರಿಗಳ ಸಾರ್ವಜನಿಕರೊಂದಿಗೆ ಉಡಾಫೆಯಿಂದ ಮಾತನಾಡುತ್ತಾರೆ. ಪ್ರಯಾಣಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಮಳೆ ಬಂದಾಗ ಗ್ರಾಮೀಣ ಸಾರಿಗೆಯ ಡಕೋಟ ಬಸ್ಸಿನ ಒಳಗೆ ಸೋರುತ್ತಿದ್ದು ಛತ್ರಿ ಹಿಡಿದು ಪ್ರಯಾಣಿಕರು ಕೂರಬೇಕು’ ಎಂದು ಸಾರಿಗೆ ಸಂಸ್ಥೆ ವಿರುದ್ದ ಕಿಡಿಕಾರಿದರು.ವಿಶ್ವವಿಖ್ಯಾತ ದೇಗುಲವಿರುವ ಪ್ರವಾಸಿ ಕೇಂದ್ರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ತೊಂದರೆ ಇದೆ. ಪ್ರಯಾಣಿಕರಿಗೆ ಬಸ್ ಮಾರ್ಗ ತೋರಿಸುವ ಬೋರ್ಡ್‌ಗಳನ್ನು ಹಿಂದೆ ನೇತು ಹಾಕಿ ಖಾಸಗಿ ಜಾಹಿರಾತು ಕಂಪನಿಯ ಬೋರ್ಡ್‌ಗಳನ್ನು ಮುಂದುಗಡೆ ಹಾಕಲಾಗಿದೆ. ಇದರಿಂದ ಬಸ್ ನಿಲುಗಡೆ ಬಗ್ಗೆ ಪ್ರಯಾಣಿಕರು ಅಕ್ಕಪಕ್ಕದವರನ್ನು ಕೇಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಪೂರ್ಣ ಸೊಳ್ಳೆ, ನೊಣಗಳ ತಾಣವಗಿದ್ದು ಸ್ವಚ್ಛತೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದ ಅಧಿಕಾರಿಗಳ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕಿದೆ. ಶಾಸಕರು ಒಂದು ವಾರದ ಹಿಂದೆ ನಿಲ್ದಾಣವನ್ನು ಸ್ವಚ್ಚವಾಗಿಡುವಂತೆ ಅಧಿಕಾರಿಗಳಿಗೆ ತಿಳಿ ಹೇಳಿದ್ದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದರು.ಕರವೇ ಕಾರ್ಯದರ್ಶಿ ಜಯಪ್ರಕಾಶ್ ಮಾಳೆಗೆರೆ ಮಾತನಾಡಿ, ಬೆಳಗಿನ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಳುಹಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ವಿಚಾರಿಸಲು ಬಂದಂತ ಸಂದರ್ಬದಲ್ಲಿ ಸಾರ್ವಜನಿಕರ ಮೇಲೆ ಇಲ್ಲಿಯ ಸಹಾಯಕ ಚಾಲಕ ಹಾಗೂ ನಿರ್ವಾಹಕ ಮಂಜಪ್ಪ ಉಡಾಫೆಯಿಂದ ವರ್ತಿಸಿದರು. ಮೇಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರೆ, ‘ನಾವು ಇಲ್ಲೇ ಇರಬೇಕು ಅಂತ ಏನಿಲ್ಲಾ, ಎಲ್ಲಿ ಬೇಕಾದರೂ ಕೆಲಸ ಮಾಡುತ್ತೇವೆ, ನೀವು ಯಾರಿಗೇ ದೂರೂ ಕೊಟ್ಟರೂ ಹೆದರೋಲ್ಲಾ’ ಎಂದು ಉತ್ತರಿಸುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದ ಸ್ಥಿತಿ ನಿರ್ಮಾಣವಾಗಿದ್ದು ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳು ಸರಿಯಾದ ಬಸ್ ಸಿಗದೆ ಪ್ರತಿಭಟನೆ ದಾರಿ ಹಿಡಿಯುವುದು ಮಾಮೂಲಾಗಿದೆ. ಕೂಡಲೇ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ತಮ್ಮ ಮನವಿ ಪುರಸ್ಕರಿಸಬೇಕು. ಇಲ್ಲದಿದ್ದರೆ ಮುಂದಿನ ವಾರ ಬಸ್ ನಿಲ್ದಾಣ ಬಂದ್ ಮಾಡಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಧಿಕಾರಿಗಳ ವಿರುದ್ಧ ಕ್ರಮ: ಶಾಸಕ ಸುರೇಶ್
‘ಒಂದು ವಾರದ ಹಿಂದೆ ಅಧಿಕಾರಿಗಳಿಗೆ ನಾನು ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ನೀಡಿದ್ದೇನೆ. ಮತ್ತೆ ಇದು ಪ್ರೀತಿ ಮುಂದುವರೆದರೆ ಮುಲಾಜಿಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಸುರೇಶ್ ತಿಳಿಸಿದರು.ಈ ಸಂದರ್ಭದಲ್ಲಿ ಅರುಣ್ ಸಿಂಗ್, ಮಂಜು ಆಚರ್, ಕಾರ್ಯದರ್ಶಿ ಕಾರ್ತಿಕ್, ಯುವ ಘಟಕದ ಅಧ್ಯಕ್ಷ ಸತೀಶ್, ನವೀನ್, ಹುಸೇನ್, ರತ್ನಾಕರ್, ಮಂಜುನಾಥ್, ಸತೀಶ್, ಕೋಳಿ ಚಂದ್ರು, ದೇವುಪ್ರಸಾದ್, ತೀರ್ಥಕುಮಾರ್, ಸಲ್ಮಾನ್, ರೈತ ಸಂಘದ ನಂಜಪ್ಪ, ಇತರರು ಹಾಜರಿದ್ದರು.