ಸಾರಾಂಶ
ನಗರದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿರುವ ಸಂಚಾರ ವಿಭಾಗದ ಪೊಲೀಸರಿಗೆ 19 ಅಂಶಗಳ ಮಾರ್ಗಸೂಚಿಯನ್ನು ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿರುವ ಸಂಚಾರ ವಿಭಾಗದ ಪೊಲೀಸರಿಗೆ 19 ಅಂಶಗಳ ಮಾರ್ಗಸೂಚಿಯನ್ನು ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ನೀಡಿದ್ದಾರೆ. ಇತ್ತೀಚಿಗೆ ನಗರದಲ್ಲಿ ರಾತ್ರಿ ವೇಳೆ ಸಹ ಹೆಚ್ಚಿನ ವಾಹನಗಳ ಸಂಚಾರವಿರುವ ಕಾರಣಕ್ಕೆ ಅಪಘಾತಗಳು ಹೆಚ್ಚಾಗುತ್ತಿದೆ . ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸೂಚನೆಗಳನ್ನು ಪಾಲಿಸಬೇಕು ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.ಮಾರ್ಗಸೂಚಿಗಳು
ತಮ್ಮ ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆ ಯಾವುದಾದರೂ ಕಾರ್ಯಕ್ರಮಗಳು ಇವೆಯೇ? ಆ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಬಗ್ಗೆ ತಿಳಿದು ಸುಗಮ ಸಂಚಾರಕ್ಕೆ ಕ್ರಮ ಜರುಗಿಸಬೇಕು. ರಾತ್ರಿ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ದೂರುಗಳು ಮಹಿಳೆಯರಿಂದ ಬಂದರೆ ವಿಳಂಬ ಮಾಡದೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ರವಾನಿಸಿ, ಸೂಕ್ತ ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ದೂರುದಾರರ ಜತೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ತೆರಳಬೇಕು. ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿ ಕ್ರೇನ್ ಮಾಲಿಕರು, ಸ್ವಯಂ ಸೇವಕರು, ರಾಜಕೀಯ ಮುಖಂಡರು, ಆಟೋ ಚಾಲಕರು, ಆಸ್ಪತ್ರೆಯ ಮೇಲ್ವಿಚಾರಕರು, ಅಂಬ್ಯುಲೆನ್ಸ್ ಚಾಲಕರು, ಸಿವಿಲ್ ಡಿಫೆನ್ಸ್, ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.ಪೀಕ್ ಅವರ್ಸ್ ಹೊರತುಪಡಿಸಿ ಉಳಿದ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವಂತೆ ಮತ್ತು ವಾಹನಗಳು ಕೆಟ್ಟು ನಿಂತರೆ ಆ ವಾಹನಗಳನ್ನು ತೆರವುಗೊಳಿಸುವ ಕ್ರೇನ್ ಅಥವಾ ಟೋಯಿಂಗ್ ವಾಹನಗಳ ಬಗ್ಗೆ ಮಾಹಿತಿಯನ್ನು ಹೊರವರ್ತುಲ ರಸ್ತೆಗಳ ಠಾಣೆಗಳ ಪೊಲೀಸರು ಪಡೆಯಬೇಕು.ರಾತ್ರಿ ವೇಳೆ ಅಪಘಾತವಾದಾಗ ಅದಷ್ಟೂ ಬೇಗ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಜೊತೆಗೆ ಆರೋಪಿ ಪತ್ತೆಯ ಸಹ ಕ್ರಮ ಜರುಗಿಸಬೇಕು. ವೈರ್‌ಲೆಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಹಾಗೂ ನಿಸ್ತಂತು ಕೋಣೆಯಿಂದ ಬರುವ ಸಂದೇಶಗಳಿಗೆ ಸ್ಪಂದಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಮಳೆಗಾಲದಲ್ಲಿ ಹೆಚ್ಚಾಗಿ ಅಪಘಾತವಾಗುವ ಸ್ಥಳಗಳು, ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಯ ಜೊತೆಗೆ ಸಮನ್ವಯ ಸಾಧಿಸಿ ಸುರಕ್ಷಿತ ಕ್ರಮಗಳ ಜರುಗಿಸಬೇಕು. ಮರಗಳು ಬಿದ್ದ ಮಾಹಿತಿ ಬಂದಲ್ಲಿ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಆ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ವಿರುದ್ಧ ವಿಶೇಷ ಕಾರ್ಯಾಚರಣೆ ಸೂಚನೆ ಪಾಲಿಸಬೇಕು.*.ರಾತ್ರಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮೇಲಾಧಿಕಾರಿಗಳ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು.
*ಸುಸಜ್ಜಿತವಾದ ಎರಡು ಬೈಕ್ ಲಭ್ಯವಿರುವಂತೆ ಠಾಣಾಧಿಕಾರಿಗಳು ನೋಡಿಕೊಳ್ಳಬೇಕು.*ಮಹಿಳೆಯರಿದ್ದ ವಾಹನಗಳ ಅಪಘಾತದ ಕುರಿತು ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಬೇಕು.
*ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಅಪಘಾತಕ್ಕೀಡಾಗಿದ್ದರೆ ತುರ್ತಾಗಿ ಸ್ಪಂದಿಸಬೇಕು*ಗಣ್ಯವ್ಯಕ್ತಿಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಅನುವು ಮಾಡಿಕೊಡಬೇಕು.
*ಅಂಬ್ಯುಲೆನ್ಸ್, ಆಗ್ನಿಶಾಮಕ ದಳ ವಾಹನ ಸಾಗುವ ಮಾರ್ಗದಲ್ಲಿ ಅದ್ಯತೆ ನೀಡಬೇಕು.*ರಾತ್ರಿ ,ನಸುಕಿನ ವೇಳೆ ವೀಲ್ಹಿಂಗ್ ಮಾಡುವ ಸ್ಥಳಗಳನ್ನು ಗುರುತಿಸಿ ನಿಗಾ ಇಡಬೇಕು.
*ಸಿಗ್ನಲ್ ಲೈಟ್ಸ್‌ಗಳು, ಪೆಲಿಕಾನ್ ಸಿಗ್ನಲ್, ಸಿಸಿಟಿವಿ ಕ್ಯಾಮರಾಗಳ, ಸರ್ಕಾರಿ ಸ್ವತ್ತುಗಳ ಮೇಲೆ ಕಣ್ಣೀಡಬೇಕು*ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಮನೋರಂಜನ ಸ್ಥಳಗಳಲ್ಲಿ ಟ್ರಾಫಿಕ್ ಉಂಟಾಗದಂತೆ ಕ್ರಮವಹಿಸಬೇಕು.
*ಪ್ರಮುಖ ಜಂಕ್ಷನ್‌ಗಳಲ್ಲಿ ಮುಖ್ಯವಾಗಿ ರಿಪ್ಲೆಕ್ಟಿವ್ ಜಾಕೆಟ್‌ಗಳನ್ನು ಧರಿಸಬೇಕು.