ಸಾರಾಂಶ
ಪಶ್ಚಿಮ ಘಟ್ಟದಲ್ಲಿ ಅಕ್ರಮವಾಗಿ ರೆಸಾರ್ಟ್ ಮತ್ತು ಹೋಂಸ್ಟೇಗಳು ತಲೆ ಎತ್ತಿರುವ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ಅಂತಹ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯಾದ್ಯಂತ ಅರಣ್ಯ ಭೂಮಿ ಒತ್ತುವರಿ ತಡೆಗಟ್ಟಲು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯ ಆರಂಭವಾಗಿದೆ. ದೊಡ್ಡ ಮಟ್ಟದ ಒತ್ತುವರಿ ಆಗಿದ್ದರೆ ತೆರವು ಮಾಡಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೀಸಲು ಅರಣ್ಯ ಜಾಗ ಒತ್ತುವರಿಯಾಗಿದ್ದರೆ ಯಾವುದೇ ರಾಜಿ ಇಲ್ಲ. ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಹೇಳಿದರು.ಸಣ್ಣ ರೈತರಿಗೆ ತೊಂದರೆ ಇಲ್ಲ: ಅರಣ್ಯ ಕಾಯ್ದೆ ಜಾರಿಯಾಗುವ ಮೊದಲು ಮೂರು ಎಕರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವ ಬುಡಕಟ್ಟು ಸಮುದಾಯ ಮತ್ತು ಸಣ್ಣ ರೈತರಿಗೆ ಇದರಿಂದ ತೊಂದರೆ ಆಗದಂತೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಂಟಿ ಸರ್ವೇ ಕಾರ್ಯ ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರಿನಲ್ಲಿ ಈಗಾಗಲೇ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಇದೀಗ ಆರಂಭವಾಗಿದೆ. ಕೆಲವೆಡೆ ಕಂದಾಯ ಭೂಮಿ ಅರಣ್ಯ ಇಲಾಖೆ ವಶದಲ್ಲಿದೆ ಎಂಬ ದೂರುಗಳೂ ಇವೆ. ಜಮೀನು ಯಾರಿಗೆ ಸೇರಿದ್ದು ಎನ್ನುವುದು ಜಂಟಿ ಸರ್ವೇ ಮೂಲಕ ಗೊತ್ತಾಗಲಿದೆ ಎಂದರು.ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮ: ಪಶ್ಚಿಮ ಘಟ್ಟದಲ್ಲಿ ಅಕ್ರಮವಾಗಿ ರೆಸಾರ್ಟ್ ಮತ್ತು ಹೋಂಸ್ಟೇಗಳು ತಲೆ ಎತ್ತಿರುವ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ಅಂತಹ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಬೇಸಗೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಡ್ಗಿಚ್ಚು ತಡೆಯಲು ಮುಂಜಾಗ್ರತೆಯಾಗಿ ಫೈರ್ ಲೈನ್ ನಿರ್ಮಿಸಲು ಹಾಗೂ ಅಗ್ನಿ ಶಾಮಕ ದಳ ಸನ್ನದ್ಧವಾಗಿರಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೆಂಕಿ ನಂದಿಸಲು ಹೆಲಿಕಾಪ್ಟರ್‌ನ್ನೂ ಬಳಕೆ ಮಾಡಲಾಗುವುದು ಎಂದು ಹೇಳಿದರು.ಫಲ್ಗುಣಿ ನದಿಗೆ ತ್ಯಾಜ್ಯ ಸೇರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ನೀರಿನ ಗುಣಮಟ್ಟ ಪರೀಕ್ಷಿಸಿ, ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಮುಖಂಡರಾದ ರಕ್ಷಿತ್ ಶಿವರಾಮ್ ಇದ್ದರು.ಚಾರಣಕ್ಕೆ ಇನ್ಮುಂದೆ ಆನ್‌ಲೈನ್ ಬುಕ್ಕಿಂಗ್- ರಾಜ್ಯದ ಎಲ್ಲ ಚಾರಣ ಮಾರ್ಗಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪರಿಸರಕ್ಕೆ ಹಾನಿ ಉಂಟಾಗುತ್ತಿರುವ ಕುರಿತು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಟ್ರೆಕ್ಕಿಂಗ್ ಪಾಯಿಂಟ್‌ಗಳು ಜಾಸ್ತಿಯಿದ್ದು, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಈ ಕುರಿತು ಪ್ರತಿ ಚಾರಣ ತಾಣಕ್ಕೆ ಎಷ್ಟು ಮಂದಿಗೆ ಅವಕಾಶ ನೀಡಬಹುದು ಎಂಬ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ಚಾರಣ ತಾಣಗಳನ್ನು ಏಕಗವಾಕ್ಷಿ ವೇದಿಕೆಯಡಿ ತಂದು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಯಾರಿಗೆ ಪಾಸ್ ಸಿಗುತ್ತದೋ ಅವರು ಮಾತ್ರ ಚಾರಣಕ್ಕೆ ತೆರಳಲು ಅವಕಾಶ ನೀಡಲಾಗುವುದು, ಆದಷ್ಟು ಶೀಘ್ರ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. ಅಲ್ಲದೆ ಚಾರಣ ತಾಣಗಳ ಅಭಿವೃದ್ಧಿಗಾಗಿ ಅಧ್ಯಯನ ವರದಿ ನೀಡಲು ಸೂಚಿಸಲಾಗಿದೆ ಎಂದರು.