ನಿಟ್ಟೆ ಸಮೂಹ ಸಂಸ್ಥೆಗಳ ಪ್ರಮುಖರಾಗಿದ್ದ ವಿನಯ್ ಹೆಗ್ಡೆ ಶಿಕ್ಷಣ ಮತ್ತು ಆರೋಗ್ಯ ರಂಗದಲ್ಲಿ ಅವಿಭಜಿತ ದ.ಕ. ಜಿಲ್ಲೆಗೆ ಅವಿಸ್ಮರಣೀಯ ಕೊಡುಗೆ ನೀಡಿದವರು.
ಮೂಡುಬಿದಿರೆ: ನಿಟ್ಟೆ ಸಮೂಹ ಸಂಸ್ಥೆಗಳ ಪ್ರಮುಖರಾಗಿದ್ದ ವಿನಯ್ ಹೆಗ್ಡೆ ಶಿಕ್ಷಣ ಮತ್ತು ಆರೋಗ್ಯ ರಂಗದಲ್ಲಿ ಅವಿಭಜಿತ ದ.ಕ. ಜಿಲ್ಲೆಗೆ ಅವಿಸ್ಮರಣೀಯ ಕೊಡುಗೆ ನೀಡಿದವರು. ಮಾಧ್ಯಮ ರಂಗದ ಕುರಿತು ಅವರ ಕಾಳಜಿ ಕೋವಿಡ್ ಸಂದರ್ಭದಲ್ಲಿ 16ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳ ಅನಾರೋಗ್ಯಕ್ಕೆ ಸ್ಪಂದಿಸಿ ತಮ್ಮ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಭರಿಸಿಕೊಂಡು ತಮ್ಮ ಮಾನವೀಯ ಕಾಳಜಿ ಮೆರೆದಿದ್ದರು ಎಂದು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ಮರಿಸಿಕೊಂಡರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2026- 28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ವಿನಯ್ ಹೆಗ್ಡೆಯವರಿಗೆ ನುಡಿನಮನ ಸಲ್ಲಿಸಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್. ಪದಗ್ರಹಣ ನೆರವೇರಿಸಿ ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಶುಭ ಹಾರೈಸಿದರು.
ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ಸಂಘದ ಬೆಳವಣಿಗೆ, ಮುಂದಿನ ಕನಸುಗಳ ಕುರಿತು ವಿವರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಶುಭ ಹಾರೈಸಿದರು.ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜೈಸನ್ ತಾಕೋಡೆ ವಂದಿಸಿದರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ನಿರೂಪಿಸಿದರು.