ಸಿದ್ದಪ್ಪಜ್ಜನ ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ಜೋಶಿ, ಟೆಂಗಿನಕಾಯಿ ಭಾಗಿ

| Published : Jan 16 2024, 01:47 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ಕೇಂದ್ರ ಸಚಿವ ಜೋಶಿ ಮತ್ತು ಶಾಸಕ ಟೆಂಗಿನಕಾಯಿಉಣಕಲ್‌ನಲ್ಲಿರುವ ಸಿದ್ದಪ್ಪಜ್ಜನ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು

ಹುಬ್ಬಳ್ಳಿ: ಶ್ರೀ ರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಿದರು.

ಇಲ್ಲಿನ ಉಣಕಲ್‌ನಲ್ಲಿರುವ ಸಿದ್ದಪ್ಪಜ್ಜನ ದೇವಸ್ಥಾನದಲ್ಲಿ ಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಸಿದರು. ಈ ವೇಳೆ ಮಾತನಾಡಿದ ಜೋಶಿ, ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಭ್ರಮ ಇಡೀ ದೇಶದಲ್ಲೇ ಮುಗಿಲು ಮುಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಮ್ಮ ಹತ್ತಿರದ ದೇವಸ್ಥಾನಗಳ ಸ್ವಚ್ಛತೆ ಮಾಡಬೇಕು ಎಂದು ಕರೆ ಕೊಟ್ಟಿದ್ದರು.

ಇದರಿಂದಾಗಿ ಲಕ್ಷಾಂತರ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಭಾರತದ ಒಟ್ಟಾರೆ ರಾಮರಾಜ್ಯದ ಕನಸಿನತ್ತ ನಾವು ಹೆಜ್ಜೆ ಇಟ್ಟಿದ್ದೇವೆ. ಎಲ್ಲರೂ ಒಂದಾಗಿ ಬಾಳಬೇಕು ಎಂಬ ಕಲ್ಪನೆ ಎಲ್ಲರಲ್ಲೂ ಬರಲಿ ಎಂಬ ಕಾರಣಕ್ಕೂ ಪ್ರಧಾನಿಗಳು ಈ ಕರೆ ಕೊಟ್ಟಿದ್ದಾರೆ ಎಂದರು.

ಸಚಿವರೊಂದಿಗೆ ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಮಲ್ಲಿಕಾರ್ಜುನ ಗುಂಡೂರ, ಉಮೇಶಗೌಡ ಕೌಜಗೇರಿ, ಮುಖಂಡ ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.