ಸಾರಾಂಶ
ಚಿಕ್ಕಮಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸೋಮವಾರ ನಗರದ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರು ಸಮಾಜ ಹಾಗೂ ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ವರ್ಗ ಹಳಿ ತಪ್ಪಿ ದಾಗ ಸರಿದಾರಿಗೆ ತರುವ ಪ್ರಯತ್ನವನ್ನು ಪತ್ರಿಕಾರಂಗ ಮಾಡುತ್ತಿದೆ. ಜತೆಗೆ ನೊಂದ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.ಆಡಳಿತ ವರ್ಗದ ಗಮನಕ್ಕೆ ಬಾರದ ಅನೇಕ ವಿಚಾರವನ್ನು ಹಾಗೂ ಜಡ್ಡುಗಟ್ಟಿದ ಆಡಳಿತಕ್ಕೆ ಬಿಸಿಮುಟ್ಟಿಸಿ ಆಡಳಿತ ವರ್ಗ ಚುರುಕುಗೊಳ್ಳುವಂತೆ ಮಾಡಲಾಗುತ್ತಿದೆ. ಈ ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದ ಅವರು, ಪತ್ರ ಕರ್ತರ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅದನ್ನು ಸರಿಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ತಾವು ಮಾಡಿರುವುದಾಗಿ ತಿಳಿಸಿದರು.ಪತ್ರಕರ್ತರಿಗೆ ತಮ್ಮದೆಯಾದ ಸುದ್ದಿಮೂಲವಿದ್ದು, ಕೆಲವೊಮ್ಮೆ ಧಾವಂತಕ್ಕೆ ಬೀಳುವ ಪತ್ರಕರ್ತರು ಮಾಹಿತಿ ಬಗ್ಗೆ ಪರಾಮರ್ಶೆಗೆ ಒಳಪಡಿಸದೆ ನೇರವಾಗಿ ಪ್ರಚಾರ ಮಾಡುವುದರಿಂದ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡವರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಕೆಲ ನಿದರ್ಶನಗಳನ್ನು ತೆರೆದಿಟ್ಟು, ಪತ್ರಕರ್ತರು ಸುದ್ದಿ ಪ್ರಕಟಣೆಗೂ ಮುನ್ನಾ ಸುದ್ದಿಯ ಸತ್ಯಾಸತ್ಯತೆಯನ್ನು ಪರಮರ್ಶೆಗೆ ಒಳಪಡಿಸಬೇಕು ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತಿದ್ದು ಸ್ವಾತಂತ್ರ್ಯ ಹೋರಾಟದಲ್ಲೂ ತನ್ನದೆ ಪಾತ್ರ ನಿರ್ವಹಿಸಿದೆ. ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ. ಪತ್ರಿಕಾರಂಗ ಮೌಲ್ಯಾಧಾರಿತವಾಗಿ ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡು ವಂತಾಗಲಿ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವ ಕೆಲಸವನ್ನು ಜಿಲ್ಲೆಯ ಪತ್ರಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ. ಜತೆಗೆ ಚುನಾವಣೆ ಸೇರಿದಂತೆ ಸರ್ಕಾರದ ಯೋಜನೆ ಗಳನ್ನು ಜನತೆಗೆ ಮುಟ್ಟಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಹೆಜ್ಜೆ ಹಾಕುತ್ತಿದ್ದು, ಜಿಲ್ಲಾಡಳಿತಕ್ಕೆ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್, ಪತ್ರಕರ್ತರಾದ ವಿಜಯಕುಮಾರ್, ಯೋಗೀಶ ಕಾಮೇನಹಳ್ಳಿ ಹಾಗೂ ವೀರೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಪಂ ಸಿಇಓ ಎಚ್.ಎಸ್. ಕೀರ್ತನಾ, ಮೆಸ್ಕಾಂ ಎಂ.ಡಿ.ಪದ್ಮಾವತಿ ಉಪಸ್ಥಿತರಿದ್ದರು.ಪತ್ರಕರ್ತ ಉಮೇಶ್‌ಕುಮಾರ್ ಮಾತನಾಡಿದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಸ್ವಾಗತಿಸಿದರು. ಸಿ.ಡಿ. ಚಂದ್ರೇಗೌಡ ವಂದಿಸಿದರು. ಎನ್.ಕೆ. ಗೋಪಿ ಕಾರ್ಯಕ್ರಮ ನಿರೂಪಿಸಿದರು. 29 ಕೆಸಿಕೆಎಂ 5ಚಿಕ್ಕಮಗಳೂರಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಸಚಿವ ಕೆ.ಜೆ. ಜಾರ್ಜ್ ಅವರು ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಡಿಸಿ ಮೀನಾ ನಾಗರಾಜ್, ಮೆಸ್ಕಾಂ ಎಂಡಿ ಪದ್ಮಾವತಿ, ಅಧ್ಯಕ್ಷ ರಾಜೇಶ್ ಇದ್ದರು.