ಸಾರಾಂಶ
ಹೊನ್ನಾವರ: ಸಮಾಜದ ಅಂಕುಡೊಂಕು ತಿದ್ದುವ ಪತ್ರಿಕಾರಂಗ ಶ್ರೇಷ್ಠವಾಗಿದೆ. ವಸ್ತುನಿಷ್ಠ ವರದಿಗಾರರಿಗೆ ಇಂದಿಗೂ ಗೌರವವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯಗಳನ್ನು ಸರಿಯಾಗಿ ಜನತೆಗೆ ತಿಳಿಸಿ ಸರ್ವರನ್ನೂ ತಿದ್ದುವ ಕಾರ್ಯವನ್ನು ಪತ್ರಿಕಾರಂಗ ಮಾಡುತ್ತದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಐವತ್ತು ವರ್ಷಗಳ ಹಿಂದೆ ಹಿರಿಯರು ನಿಸ್ವಾರ್ಥವಾಗಿ ಕಟ್ಟಿದ ಸಂಘ ಸಾರ್ಥಕವಾಗಿದೆ. ಪತ್ರಕರ್ತರು ಜನರ ಸಮಸ್ಯೆಗಳನ್ನು ಬರೆದು ಅಧಿಕಾರದಲ್ಲಿದ್ದವರ ಗಮನಕ್ಕೆ ತರುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಪಾತ್ರ ಮಹತ್ವವಾದುದು. ಪತ್ರಕರ್ತರು ಜಿಲ್ಲೆಗೆ ಬೇಕಾದ ವಿಶ್ವವಿದ್ಯಾಲಯದಂಥ ಅಗತ್ಯಗಳ ಕುರಿತು ಬೆಳಕು ಚೆಲ್ಲಬೇಕು. ವಸ್ತುನಿಷ್ಠ ವರದಿಗೆ ಮಹತ್ವ ನೀಡಬೇಕು ಎಂದರು.ಹಿರಿಯ ಪತ್ರಕರ್ತ, ಬರಹಗಾರ ಟಿ.ಎಂ. ಸುಬ್ಬರಾಯ ದಿಕ್ಸೂಚಿ ಮಾತನಾಡಿ, ಪತ್ರಿಕೋದ್ಯಮದ ಅನುಭವ ಗಟ್ಟಿಯಾಗಿ ಸೃಜನಶೀಲ ಬರಹಗಾರನಾಗಲು ಸಾಧ್ಯವಾಗುವುದು. ಪತ್ರಕರ್ತನಾದವನು ವ್ಯಕ್ತಿನಿಷ್ಠನಾಗಿ ಬರೆಯುವುದಕ್ಕೆ ಶುರು ಮಾಡಿದಾಗ ಅವನತಿ ಆಗುವನು. ವರದಿಯಲ್ಲಿ ತನ್ನ ಮೂಗು ತೂರಿಸದೇ ವಸ್ತುನಿಷ್ಠ ವರದಿ ಮಾಡಿದಾಗ ಆತ ಜನಮಾನಸದಲ್ಲಿ ಶಾಶ್ವತವಾಗಿರುತ್ತದೆ ಎಂದರು.ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಹಾಗೂ ಎಲ್ಲ ಸದಸ್ಯರ ಶ್ರಮದಿಂದ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಐವತ್ತು ಲಕ್ಷ ರು.ಗಳ ಕ್ಷೇಮನಿಧಿ ಸ್ಥಾಪಿಸಿ ಪತ್ರಕರ್ತರಿಗೆ ನೆರವಾಗುವ ಉದ್ದೇಶ ಹೊಂದಿದೆ. ರಾಜ್ಯ ಸಂಘವು ನಮ್ಮ ಸಂಘಕ್ಕೆ ಉತ್ತಮ ಜಿಲ್ಲಾ ಸಂಘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದರು.ಹಿರಿಯ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಉತ್ತರ ಕನ್ನಡದ ಪತ್ರಕರ್ತರು ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಪ್ರಶಸ್ತಿ ಪ್ರದಾನ: ಹಿರಿಯ ಪತ್ರಕರ್ತ ಮೋಹನ ಹೆಗಡೆ ಅವರಿಗೆ ಕೆ. ಶಾಮರಾವ್ ಪ್ರಶಸ್ತಿ, ಹೊನ್ನಾವರದ ಸತೀಶ ತಾಂಡೇಲ ಅವರಿಗೆ ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಘುನಾಥ ಪೈ, ಉದ್ಯಮಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಜಿಲ್ಲಾ ಸಂಘದ ಉಪಾಧ್ಯಕ್ಷ ವಿಠ್ಠಲದಾಸ ಕಾಮತ, ಭವಾನಿಶಂಕರ ನಾಯ್ಕ, ರಾಧಾಕೃಷ್ಣ ಭಟ್, ನರಸಿಂಹ ಸಾತೊಡ್ಡಿ ಇದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಸಂಘವು ನಡೆದು ಬಂದ ದಾರಿ ವಿವರಿಸಿದರು. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಎಚ್.ಎಂ. ಮಾರುತಿ ಸ್ವಾಗತಿಸಿದರು. ರಾಧಾಕೃಷ್ಣ ಭಟ್ ವಂದಿಸಿದರು. ತಾರಾ ಜಿ. ಭಟ್ ಪ್ರಾರ್ಥನಾ ಗೀತೆ ಹಾಡಿದರು.