ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪತ್ರಿಕೋದ್ಯಮ ಕಾರ್ಪೊರೇಟ್ ಸಂಸ್ಥೆಯಾಗಿ ಬೆಳೆಯುತ್ತಿದೆ. ಪ್ರಸ್ತುತ ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಕೆಆರ್‌ಎಸ್‌ನಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಜನರ ದಿಕ್ಕು ತಪ್ಪಿಸುತ್ತಿವೆ. ಸ್ವಾತಂತ್ರ್ಯ ಚಳವಳಿ ವೇಳೆ ದೇಶದ ಸ್ವಾತಂತ್ರ್ಯ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಮ್ಮ ಭಾರತೀಯ ಪತ್ರಿಕೋದ್ಯಮ, ರೂಪಿಸಿದ್ದ ಮಾದರಿಗಳ ಮೇಲೆ ಧೂಳು ಕುಳಿತಿದೆ. ಈ ಧೂಳನ್ನು ಕೊಡವಿ ಮತ್ತೆ ನಮ್ಮ ಮಾದರಿಗಳಿಗೆ ಜೀವಕೊಡಬೇಕಿದೆ ಎಂದರು.
ನಮ್ಮ ದೇಶ ರಾಜಕೀಯ ನಾಯಕತ್ವದಿಂದ ಆರ್ಥಿಕ ನಾಯಕತ್ವದ ಕೈಗೆ ಜಾರಿರುವುದರ ಪರಿಣಾಮಗಳನ್ನು ಪತ್ರಕರ್ತರು ಪತ್ತೆ ಹಚ್ಚಬೇಕಿದೆ. ಮೊದಲೆಲ್ಲ ಆರ್ಥಿಕ ಶಕ್ತಿಗಳನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದವು. ಇಂದು ಆರ್ಥಿಕ ಶಕ್ತಿಗಳೇ ಸರ್ಕಾರಗಳನ್ನು ನಿಯಂತ್ರಿಸುತ್ತಾ, ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಬೇಕಾದ ಪತ್ರಿಕೋದ್ಯಮಕ್ಕೆ ಮೈ ಮರೆವು ಬಂದಿರುವುದು ಅಪಾಯದ ಸಂಕೇತ ಎಂದು ಎಚ್ಚರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪತ್ರಕರ್ತರು ನಿಷ್ಪಕ್ಷಪಾತವಾಗಿ ಸತ್ಯವನ್ನು ಬರೆದರೆ ಸಾಕು ಸಮಾಜ, ರಾಜ್ಯ, ದೇಶಕ್ಕೆ ಅದು ಸಹಕಾರಿಯಾಗುತ್ತದೆ ಎಂದರು.
ಪತ್ರಕರ್ತರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಪತ್ರಕರ್ತರಿಗೆ 15 ಸಾವಿರ ರು. ಮಾಶಾಸನ ನೀಡಲಾಗುತ್ತಿದೆ. ಇದು ನಿವೃತ್ತಿ ಜೀವನಕ್ಕೆ ಪತ್ರಕರ್ತರಿಗೆ ಅನುಕೂಲವಾಗಲಿದೆ. ಎಲ್ಲ ಪತ್ರಕರ್ತರಿಗೂ ಬಸ್ ಪಾಸ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹೆಚ್ಚಾಗಿ ಸುಳ್ಳು ಸುದ್ಧಿಗಳು ಪ್ರಜ್ವಲಿಸುತ್ತಿವೆ. ಇದು ಒಂದು ಬಾರಿ ನನಗೂ ಆಗಿದೆ. ಇಂತಹ ಸುದ್ದಿಗಳಿಗೆ ಜನರು ಕಿವಿಗೊಡಬಾರದು. ಸತ್ಯ, ವಸ್ತುನಿಷ್ಠ ಸುದ್ಧಿಗಳಿಗೆ ಆದ್ಯತೆ ನೀಡಬೇಕು ಎಂದು ಪತ್ರಕರ್ತರಿಗೆ ಸಲಹೆ ನೀಡಿದರು.
ಇದೇ ವೇಳೆ ಕನ್ನಡಪ್ರಭ ಮದ್ದೂರು ತಾಲೂಕು ವರದಿಗಾರ ಎಚ್.ಜಿ.ರವಿಕುಮಾರ್ ಅವರಿಗೆ ಜೀವಮಾನ ಸಾಧನೆ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಪತ್ರಕರ್ತರಾದ ಎಚ್.ಬಿ.ಸುನೀಲ್‌ಕುಮಾರ್, ಸಿದ್ದಯ್ಯ, ಆರ್.ಸೋಮಶೇಖರ್, ಎ.ಎಲ್.ಶೇಖರ್, ಎಚ್.ರವಿ ಹಾಗೂ ಕಿಕ್ಕೇರಿಯ ಕೆ.ವಿ.ಗೋವಿಂದರಾಜು ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರತಿಭಾವಂತ ವಿಧ್ಯಾರ್ಥಿಗಳು ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘ ವೆಬ್ ಸೈಟ್ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕೆ.ವಿವೇಕಾನಂದ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ರಾಷ್ಟ್ರೀಯ ಮಂಡಳಿ ಸದಸ್ಯ ಮದನ್‌ಗೌಡ, ಜಿಲ್ಲಾಧ್ಯಕ್ಷ ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ರಾಜ್ಯ ನಿರ್ದೇಶಕ ಸಿ.ಎನ್.ಮಂಜುನಾಥ್, ರಾಷ್ಟ್ರೀಯ ಮಂಡಳಿ ಸದಸ್ಯ ಜೆ.ಎಂ.ಬಾಲಕೃಷ್ಣ, ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷಿನಾರಾಯಣ್, ಪತ್ರಕರ್ತರ ಸಂಘದ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಇತರರು ಇದ್ದರು.