ಒಂದೇ ಪತ್ರಿಕೆಯಲ್ಲಿ 55 ವರ್ಷ ಸೇವೆ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಜಿ.ಯು. ಭಟ್ ಅವರು ಮಾಡಿ ತೋರಿಸಿದ್ದಾರೆ.
ಹೊನ್ನಾವರ: ಸಮಾಜದಲ್ಲಿ ಇರುವ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಜಿ.ಯು. ಭಟ್ ಇವರ ಬಳಿ ಇದೆ. ಇವರು ವಿವಿಧ ವಿಭಾಗದಲ್ಲಿ ಮಾಡಿದ ಸಾಧನೆಯ ಫಲವಾಗಿ ಸಂಕೀರ್ಣ ವಿಭಾಗದಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಸಂತಸಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದ ಅಂಗವಾಗಿ ಪ್ರಭಾತನಗರದಲ್ಲಿ ಪತ್ರಕರ್ತ ಜಿ.ಯು. ಭಟ್ ಅವರ ಮನೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಯು. ಭಟ್ ಹಾಗೂ ಪತ್ನಿ ತಾರಾ ಭಟ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಒಂದೇ ಪತ್ರಿಕೆಯಲ್ಲಿ 55 ವರ್ಷ ಸೇವೆ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಜಿ.ಯು. ಭಟ್ ಅವರು ಮಾಡಿ ತೋರಿಸಿದ್ದಾರೆ ಎಂದರು.ಆದರ್ಶ ದಂಪತಿಗಳ ರೀತಿಯಲ್ಲಿ ಸಮಾಜದಲ್ಲಿ ಬದುಕು ನಡೆಸುತ್ತಿದ್ದಾರೆ. ಪತ್ರಕರ್ತರಾಗಿ ಹಲವು ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಬರೆಯುವ ಮೂಲಕ ಧ್ವನಿಯಾಗಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿ ಅಪರೂಪದ ಸಾಧಕರಾಗಿ ಹಲವು ವರ್ಷದ ಹಿಂದೆಯೇ ಪ್ರಶಸ್ತಿ ಬರಬೇಕಿತ್ತು. ಈ ವರ್ಷ ಪ್ರಶಸ್ತಿ ಬರುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಜಿಲ್ಲೆಯ ಎಲ್ಲರನ್ನು ಒಗ್ಗೂಡಿಸಿಕೊಂಡು ತಾಲೂಕಿನಲ್ಲಿ ಒಂದು ನಾಗರಿಕ ಸನ್ಮಾನ ನಡೆಯಬೇಕು. ಆ ನಿಟ್ಟಿನಲ್ಲಿ ಎಲ್ಲರು ಪ್ರಯತ್ನಿಸೋಣ. ಈ ಕಾರ್ಯಕ್ರಮದ ಮೂಲಕ ಪ್ರಶಸ್ತಿ ಮೌಲ್ಯ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, 55 ವರ್ಷಗಳ ಕಾಲ ಪತ್ರಕರ್ತರಾಗಿ ಸಮಾಜ ಒಗ್ಗೂಡಿಸಿ ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಪರಿಷತ್ತಿನ ಧ್ವನಿಯಾಗಿ ಸಾಧಕರನ್ನು ಕಸಾಪ ಸಂಘಟನೆಯು ಸನ್ಮಾನಿಸಲಾಗುತ್ತಿದೆ. ಪತ್ರಿಕಾ ರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಜಿ.ಯು. ಭಟ್ ಅವರು, ಪ್ರಶಸ್ತಿ ಬಂದ ಮೇಲೆ ಜವಾಬ್ದಾರಿ ಹೆಚ್ಚಿಸಿದೆ. ಬದುಕಿನಲ್ಲಿ ಸಿಕ್ಕ ಎಲ್ಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಆಹ್ವಾನಿಸಿದ್ದೇನೆ. ಜಿಲ್ಲೆಯ ಹಲವು ಸಮಸ್ಯೆಗಳನ್ನು ಬಗೆಹರಿಸಲು ವಿನಂತಿಸಿದ್ದೇನೆ ಎಂದರು.ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸುಧೀಶ ನಾಯ್ಕ, ಮುಖ್ಯಾಧ್ಯಾಪಕ ಸುರೇಶ ನಾಯ್ಕ, ಪ್ರಶಾಂತ ಹೆಗಡೆ ಮೂಡಲಮನೆ, ಎಸ್.ಎಚ್. ಗುನಗಾ ಅವರು, ಜಿ.ಯು. ಭಟ್ ಅವರ ಕೊಡುಗೆಯನ್ನು ಸ್ಮರಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ, ಸದಸ್ಯರಾದ ನಾರಾಯಣ ಹೆಗಡೆ, ಜರ್ನಾದನ ಕಾಣಕೋಣಕರ, ಕೇಶವ ಶೆಟ್ಟಿ, ಮಾಸ್ತಿ ಗೌಡ, ಮೀನಾ ಗೌಡ, ಸಾಧನಾ ಬರ್ಗಿ, ಶುಭಾ ಸಭಾಯಿತ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್. ಗೌಡ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಗಜಾನನ ನಾಯ್ಕ, ವಂದಿಸಿದರು. ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.