ಸಾರಾಂಶ
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಪೊಲೀಸ್ ಮತ್ತು ಪತ್ರಕರ್ತರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಸೌಹಾರ್ದ ಟಿ-10 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಪತ್ರಕರ್ತರ ತಂಡ ಜಿಲ್ಲಾ ಪೊಲೀಸ್ ತಂಡವನ್ನು 51 ರನ್‌ಗಳಿಂದ ಸೋಲಿಸಿ, ಜಯಭೇರಿ ಸಾಧಿಸಿತು.
ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಅಂತಿಮ ಹಣಾಹಣಿಯಲ್ಲಿ ಆಲ್‌ರೌಂಡ್‌ರ ಆಟ ಪ್ರದರ್ಶನದ ಮೂಲಕ ಪತ್ರಕರ್ತರ ತಂಡ ಜಿಲ್ಲಾ ಪೊಲೀಸ್ ತಂಡ ಮಣಿಸುವ ಮೂಲಕ ಬೀದರ ಚಾಂಪಿಯನ್ಸ್ ಟ್ರೋಫಿ-2023ರ ಟ್ರೋಫಿ ತನ್ನದಾಗಿಸಿಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪತ್ರಕರ್ತರ ತಂಡ ಸಚಿನ್ ಡಿ. ಆಕ್ರಮಣಕಾರಿ ಸೆಂಚುರಿಯಿಂದ 8 ವಿಕೆಟ್‌ಗಳನ್ನು ಕಳೆದುಕೊಂಡು 138 ರನ್‌ಗಳನ್ನು ಗಳಿಸಿತ್ತು. ಸಚಿನ್ ಅವರು ಬಾರಿಸಿದ 104 ರನ್‌ಗಳಿಂದ ಪತ್ರಕರ್ತರ ತಂಡ ದೊಡ್ಡ ಮೊತ್ತ ಸಾಧಿಸಿತ್ತು. ಜತೆಗೆ ಅಕ್ಷಯ 16 ಮತ್ತು ರಾಜಕುಮಾರ 5 ರನ್ ಬಾರಿಸಿದ್ದರು. ಪೊಲೀಸ್ ತಂಡದ ಬಲಭೀಮ್ ಮತ್ತು ಮೆಹಬೂಬ್ ಅವರು ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ನಂತರ ದೊಡ್ಡ ಸ್ಕೋರ್ ಬೆನ್ನತ್ತಿದ ಪೊಲೀಸರ ತಂಡ 10 ವಿಕೆಟ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 87 ರನ್‌ಗಳನ್ನು ಮಾತ್ರಗಳಿಸಿ ಸೋಲು ಒಪ್ಪಿಕೊಂಡಿತು. ಪತ್ರಕರ್ತರ ತಂಡ ಉತ್ತಮ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆ ಮೂಲಕ ಎದುರಾಳಿ ತಂಡವನ್ನು ಕಡಿಮೆ ರನ್‌ಗಳಿಗೆ ಕಟ್ಟಿ ಹಾಕಿತು. ಮೆಹಬೂಬ್ 22 ರನ್ ಮತ್ತು ರವಿ 13 ರನ್ ಬಾರಿಸಿದರು. ಪತ್ರಕರ್ತರ ತಂಡದ ಅಕ್ಷಯ 3 ಮತ್ತು ರಾಜಕುಮಾರ 2 ವಿಕೆಟ್‌ಗಳನ್ನು ಪಡೆದು ತಂಡ ಗೆಲುವಿಗೆ ಮಹತ್ವದ ಪಾತ್ರ ವಹಿಸಿದರು.ಟೂರ್ನಿಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಪೊಲೀಸ್, ಪತ್ರಕರ್ತರ ಕ್ರಿಕೆಟ್ ಕ್ಲಬ್, ಬ್ರಿಮ್ಸ್ ವೈದ್ಯರ ತಂಡ ಮತ್ತು ಪಶು ವೈದ್ಯಾಧಿಕಾರಿಗಳ ತಂಡ ಸೇರಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಮೊದಲ ಪಂದ್ಯದಲ್ಲಿ ಪಶು ವೈದ್ಯರ ತಂಡವು ಬ್ರಿಮ್ಸ್ ವೈದ್ಯರ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿತ್ತು. ಎರಡನೇ ಪಂದ್ಯದಲ್ಲಿ ಜಿಲ್ಲಾ ಪಂಚಾಯತ್ ತಂಡವನ್ನು ಪೊಲೀಸರ ತಂಡ ಮಣಿಸಿತ್ತು. ನಂತರ ಪತ್ರಕರ್ತರ ತಂಡ ಪಶು ವೈದ್ಯರ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರೆ ಪೊಲೀಸರ ತಂಡ ಜಿಲ್ಲಾಡಳಿತ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಟೂರ್ನಿಯಲ್ಲಿ ಪತ್ರಕರ್ತರ ತಂಡದ ಸಚಿನ್‌ಕುಮಾರ ಪಂದ್ಯ ಶ್ರೇಷ್ಠ, ಅಕ್ಷಯ ಸರಣಿ ಪುರುಷೋತ್ತಮ ಮತ್ತು ಬಸಯ್ಯ ಸ್ವಾಮಿ ಅತ್ಯುತ್ತಮ ಕೀಪರ್ ಪ್ರಶಸ್ತಿ ಮತ್ತು ಪೊಲೀಸ್ ತಂಡದ ಅಯ್ಯಪ್ಪ ಅವರು ಉತ್ತಮ ಬಾಲರ್ ಪ್ರಶಸ್ತಿಯನ್ನು ಬಾಚಿಕೊಂಡರು. ಬಸವರಾಜ, ವಸಂತ ಕುಲಕರ್ಣಿ ಮತ್ತು ವಿನಾಯಕ ಕುಲಕರ್ಣಿ ಅಂಪೈರಿಂಗ್ ಮತ್ತು ಸಂತೋಷ ಪಾಟೀಲ ಕಲ್ಬುರ್ಗಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು. ಮುಕ್ರಮ್ ಖಾನ್ ಅವರು ಕಾಮೆಂಟರಿ ನಡೆಸಿಕೊಟ್ಟರು.ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಮಾಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಬಾಬು ವಾಲಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಕೆ ಗಣಪತಿ, ಸಂಘಟಕ ಅಪ್ಪಾರಾವ್ ಸೌದಿ, ವಿಜಯಕುಮಾರ ಸೋನಾರೆ ಮತ್ತು ವಿರೂಪಾಕ್ಷ ಗಾದಗಿ ಮತ್ತಿತರರು ವೇದಿಕೆಯಲ್ಲಿದ್ದರು.