ಪತ್ರಕರ್ತ ವಾಲಿ ಶೈಕ್ಷಣಿಕ ಕಾಳಜಿ ಶ್ಲಾಘನೀಯ

| Published : Mar 23 2024, 01:11 AM IST

ಸಾರಾಂಶ

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ರಜನೀಶ ವಾಲಿ ಅವರಿಗೆ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ್ ಜಿಲ್ಲಾ ಘಟಕದಿಂದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎರಡನೇ ಬಾರಿಗೆ ಅಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ರಜನೀಶ್‌ ವಾಲಿ ಅವರಿಗೆ ಸನ್ಮಾನಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಮಾತನಾಡಿ, ಡಾ.ರಜನೀಶ ವಾಲಿ ಅವರು ಓರ್ವ ಪತ್ರಕರ್ತರು ಹಾಗೂ ಉದ್ಯಮಿಯಾಗಿದ್ದವರು. ಅವರ ಶೈಕ್ಷಣಿಕ ಕಾಳಜಿಯಿಂದ ಬಿವಿ ಭೂಮರೆಡ್ಡಿ ಮಹಾವಿದ್ಯಾಲಯದ ಸುಮಾರು 52 ಎಕರೆ ಜಮೀನು ಖಾಸಗಿಯವರ ಪಾಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮರಳಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿರುವ ಬಿವಿಬಿ ಕಾಲೇಜಿಗೆ ದೊರೆಯುವಂತೆ ಮಾಡಿ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮನದಲ್ಲಿ ಅಚ್ಚಳಿಯುವಂತೆ ಉಳಿದಿರುವರು. ಜಿಲ್ಲೆಗೆ ಮಂಜುರಾದ ಸೈನಿಕ ಶಾಲೆಗೆ ಜಾಗ ನೀಡಿ ಉದಾರತೆ ತೋರಿದ ಹೆಗ್ಗಳಿಕೆ ಡಾ.ವಾಲಿ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಕಾಮಶೆಟ್ಟಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ವಾಲಿ ಪರಿವಾರದ ಪರಿಶ್ರಮ ಅಪಾರವಾಗಿದ್ದು, ಡಾ.ರಜನೀಶ ತಂದೆ ಶಿವಶರಣಪ್ಪ ವಾಲಿ ಇಡೀ ಜಿಲ್ಲೆಯ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಅವರ ಪುತ್ರರಾಗಿರುವ ಡಾ.ವಾಲಿ ಒಂದು ಹೆಜ್ಜೆ ಮುಂದೆ ಹೋಗಿ ಬಿವಿಬಿ ಕಾಲೇಜಿನ ಸರ್ವಾಂಗಿಣ ಅಭಿವೃದ್ಧಿಗಾಗಿ ಸಾಕಷ್ಟು ಉತ್ತೇಜನ ನೀಡಿರುವರು. ಅದರ ಪ್ರತಿಫಲವೇ ಅವರನ್ನು ಮರು ಆಯ್ಕೆಗೆ ಕೈ ಹಿಡಿದಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ನಾವು ಮಾಡುವ ಜನೋಪಕಾರಿ ಕಾರ್ಯಕ್ಕೆ ಮನ್ನಣೆ, ಅಧಿಕಾರ ತಾನೇ ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತವೆ. ಈ ನಿಟ್ಟಿನಲ್ಲಿ ಡಾ.ವಾಲಿಯವರ ಪ್ರಾಮಾಣಿಕ ಕಾಳಜಿ ಅವರಿಗೆ ಪುನರಾಯ್ಕೆ ಆಗಲಿಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಡಾ.ರಜನೀಶ್‌ ವಾಲಿ ಮಾತನಾಡಿ, ಇತ್ತಿಚೆಗೆ ಬೀದರ್ ಜಿಲ್ಲೆಯಲ್ಲಿ ಜರುಗಿದ ಸೈನಿಕ ಶಾಲೆಯ ಉದ್ಘಾಟನೆ ಹಾಗೂ ಬಸವೇಶ್ವರ ಬಿಇಡಿ ಕಾಲೇಜು ಕಟ್ಟಡದ ಉದ್ಘಾಟನೆಯಿಂದ ಬಿವಿಬಿ ಕ್ಯಾಂಪಸ್‌ಗೆ ಒಂದು ಹೊಸ ಕಳೆ ಬಂದಿದೆ. ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಸೇರಿದಂತೆ ಹತ್ತು ಹಲವಾರು ರಚನಾತ್ಮಕ ಕಾರ್ಯ ಮಾಡಲು ಪ್ರೋತ್ಸಾಹಿಸಿದ ಜಿಲ್ಲೆಯ ಎಲ್ಲ ಶಿಕ್ಷಣ ಪ್ರೇಮಿಗಳಿಗೂ ಹಾಗೂ ಉತ್ತಮ ಕಾರ್ಯಕ್ಕೆ ಮುಕ್ತ ಪ್ರಚಾರ ನೀಡಿದ ಪತ್ರಕರ್ತರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಡಾ.ವಾಲಿ ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಪರಿಷತ್ ಸದಸ್ಯ ದೀಪಕ ಮನ್ನಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಚೌದ್ರಿ, ಕಾರ್ಯದರ್ಶಿ ಪೃಥ್ವಿರಾಜ.ಎಸ್, ಸುನಿಲಕುಮಾರ್‌ ಕುಲಕರ್ಣಿ, ಶಿವಕುಮಾರ ವಣಗೇರಿ, ಸಂತೋಷ ಚಟ್ಟಿ, ಪತ್ರಕರ್ತ ಓಂಕಾರ ಮಠಪತಿ, ದೀಪಕ್‌ ವಾಲಿ, ಆದೀಶ ವಾಲಿ, ಪಂಡಿತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.