ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ: ಸಂಸದ ಬಿ.ವೈ. ರಾಘವೇಂದ್ರ

| Published : Jul 27 2025, 01:51 AM IST

ಸಾರಾಂಶ

ಸಮಾಜದಲ್ಲಿ ತಪ್ಪು-ಒಪ್ಪುಗಳನ್ನು ಎತ್ತಿ ತೋರಿಸುವ ಪತ್ರಕರ್ತರು ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ತಪ್ಪು-ಒಪ್ಪುಗಳನ್ನು ಎತ್ತಿ ತೋರಿಸುವ ಪತ್ರಕರ್ತರು ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ಪುರಸ್ಕಾರ, ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಪ್ರತಿಬಿಂಬ ಹಾಗೂ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪತ್ರಕರ್ತರು ನಾವು ಮಾಡುವ ಒಳ್ಳೆಯದು ಮತ್ತು ಕೆಟ್ಟದ್ದು ಏನೇ ಇದ್ದರೂ ಇದ್ದ ರೀತಿಯಲ್ಲಿ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಮಾರ್ಗದರ್ಶವೂ ಮಾಡುತ್ತಾರೆ. ಸಮಾಜದಲ್ಲಿ ದಿಕ್ಸೂಚಿಯಾಗಿ ಸೇವೆ ನೀಡುತ್ತಾರೆ ಎಂದರು.

ಪ್ರಾಮಾಣಿಕ, ನಿಷ್ಠುರತೆ, ದಿಟ್ಟತನದ ಪತ್ರಕರ್ತರು ಇಂದು ಅನೇಕ ಸವಾಲು ಎದುರಿಸಬೇಕಾದ ಸ್ಥಿತಿ ಇದೆ. ಇಂದಿನ ದಿನಮಾನದಲ್ಲಿ ಪತ್ರಕರ್ತರ ಜೀವನ ಬಹಳ ಕಷ್ಟದ ಜೀವನವಾಗಿದೆ. ಉತ್ತಮ ಪತ್ರಕರ್ತರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಎಲ್ಲರಿಂದ ಆಗಬೇಕು. ಸಮಾಜಮುಖಿ ಪತ್ರಕರ್ತರಿಗೆ ಸಮಾಜದಲ್ಲಿ ಬೆಲೆ ಇದ್ದೆ ಇರುತ್ತದೆ ಎಂದರು.

ಸಮಾಜದ ಅಂಕು-ಡೊಂಕನ್ನು ತಿದ್ದುವ ಕೆಲಸ ಪತ್ರಕರ್ತರಿಂದ ಆಗುತ್ತಿದೆ. ಆದರೆ, ಇನ್ನೂ ಸಮಾಜಕ್ಕೆ ಸತ್ಯಾಸತ್ಯತೆಯನ್ನು ತಿಳಿಸುವ ಕೆಲಸ ಆಗಬೇಕಿದೆ. ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಯಾವುದೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳಲಾಗುತ್ತದೆ. ಆದರೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಪ್ರಜಾಪ್ರಭುತ್ವದ ನಿಜವಾದ ಅಂಗಗಳು. ಸಾಮಾನ್ಯ ಮನುಷ್ಯನಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಕರ್ತನಿಗೆ ಇದೆ. ಆದರೆ, ಪತ್ರಕರ್ತರಿಗೆ ರಕ್ಷಣೆ ಇಲ್ಲ ಎಂದರು.

ಅತಿಯಾಗಿ ಬೆಳೆಯುವುದಕ್ಕೆ ಹೋದರೆ ತಡೆ ಬೀಳುತ್ತದೆ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ. ಇಂದು ಸಾಮಾಜಿಕ ಜಾಲತಾಣದ ಮೂಲಕ ಓದುಗನಿಗೆ ಧ್ವನಿ ಇದೆ. ಪತ್ರಕರ್ತರಿಗೆ ಉತ್ತರದಾಯಿತ್ವ, ಪಾರದರ್ಶಕತೆ ಇರಬೇಕು. ಎಷ್ಟೋ ವೈರಲ್ ಪೋಸ್ಟ್ ಗಳಿಂದ ಒಳ್ಳೆಯದು ಕೂಡ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದೆ. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಸಹ ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ತೃಪ್ತಿ ಇದೆ ಎಂದರು.

ಇತ್ತೀಚಿನ ವಿದ್ಯಮಾನದಲ್ಲಿ ಉದ್ಯಮಿಗಳು ತಮ್ಮ ಸಾಮ್ರಾಜ್ಯ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಮಾಧ್ಯಮ ರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಇದರಿಂದ ಉದ್ಯಮಿಗಳು ಮತ್ತು ಧರ್ಮಗುರುಗಳು ಮಾಧ್ಯಮವನ್ನು ಒಂದು ಆಯುಧವಾಗಿ ಬಳಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಇಡೀ ರಾಜ್ಯದಲ್ಲಿನ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ 1988 ರಲ್ಲಿ ಸ್ಥಾಪನೆಯಾಗಿದೆ. ಪತ್ರಕರ್ತರಿಂದ ನಿರಂತರ ಚಟುವಟಿಕೆ ಆಗುತ್ತಿದೆ. ಅನೇಕ ಸಮಯಗಳಲ್ಲಿ ಹೋರಾಟ ಮಾಡಿದ್ದೇವೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಾದ ಆರುಂಡಿ ಶ್ರೀನಿವಾಸ್‌, ಬಿ.ಟಿ.ಸತೀಶ್‌, ಕವಿತಾ, ಗಿರೀಶ್‌ ಉಮ್ರಾಯ್‌, ರವಿ ಬಿದನೂರು, ಚಂದ್ರಶೇಖರ ಶೃಂಗೇರಿ, ಎಚ್‌.ಯು.ವೈದ್ಯನಾಥ್‌, ದೇಶಾದ್ರಿ ಹೊಸ್ಮನೆ ಅವರನ್ನು ಸನ್ಮಾನಿಸಲಾಯಿತು. ಶರಣ್ಯ ನಾಯಕ್, ನವ ಎಸ್. ನಾಯಕ್, ರಘು ಸಮರ್ಥ ನಾಡಿಗ್, ಸಮರ್ಥ ಎಸ್. ಕಿರುವಾಸೆ, ವೈ.ಎಸ್. ಅನಿಕೇತನ್, ವೈ.ಎಸ್.ಆಯುಷ್, ಕೆ.ಎನ್.ಶ್ರೇಯಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್, ಬಿ.ವೈ.ರಾಘವೇಂದ್ರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ ಉಪಸ್ಥಿತರಿದ್ದರು.