ಸಾರಾಂಶ
ಭಾಷೆಯ ಮೇಲೆ ಹಿಡಿತ ಇರುವ ಪತ್ರಕರ್ತರು ಸೃಜನಶೀಲವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಪತ್ರಕರ್ತರಾಗಿದ್ದುಕೊಂಡೇ ಸಾಹಿತ್ಯ ಕೃಷಿಯನ್ನೂ ಮಾಡುವುದು ಸಾಧ್ಯವಿದೆ - ಬಾನು ಮುಷ್ತಾಕ್
ಬೆಂಗಳೂರು : ಭಾಷೆಯ ಮೇಲೆ ಹಿಡಿತ ಇರುವ ಪತ್ರಕರ್ತರು ಸೃಜನಶೀಲವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಪತ್ರಕರ್ತರಾಗಿದ್ದುಕೊಂಡೇ ಸಾಹಿತ್ಯ ಕೃಷಿಯನ್ನೂ ಮಾಡುವುದು ಸಾಧ್ಯವಿದೆ. ನಾನು ಸೃಜನಶೀಲ ಸಾಹಿತ್ಯ ಬರೆಯುತ್ತಿದ್ದ ದಿನಗಳಲ್ಲೂ ಪತ್ರಿಕೋದ್ಯಮ ಮಾಡುತ್ತಿದ್ದೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಹೇಳಿದರು.
ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣನ್ಯೂಸ್ ನೀಡಿದ ಸುವರ್ಣಸಾಧಕಿ ಪ್ರಶಸ್ತಿಯನ್ನು ಕನ್ನಡಪ್ರಭ ಕಚೇರಿಯಲ್ಲಿ ಸ್ವೀಕರಿಸಿ ಮಾತನಾಡಿದರು.
ಬುಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿದ್ದು ಲಂಡನ್ನಿಗೆ ಹೋದ ಸಂದರ್ಭದಲ್ಲಿ ಅನೇಕರು ನನ್ನ ಉತ್ಸಾಹ ಭಂಗ ಮಾಡಲು ಯತ್ನಿಸಿದರು. ಸಣ್ಣಕತೆಗೆ ಪ್ರಶಸ್ತಿ ಬರುವುದಿಲ್ಲ, ನೀವು ಲಂಡನ್ ಸುತ್ತಾಡಿಕೊಂಡು ಆರಾಮವಾಗಿರಿ ಎಂದಿದ್ದರು. ನಾನು ಅವರೆಲ್ಲರ ಮಾತುಗಳಿಂದ ಕಂಗೆಡಲಿಲ್ಲ. ಪ್ರಶಸ್ತಿ ನನಗೆ ಬಂದೇ ಬರುತ್ತದೆ ಅಂತ ಬಲವಾಗಿ ನಂಬಿದ್ದೆ. ಪ್ರಶಸ್ತಿ ಬರುವ ಮೊದಲೇ ಸ್ವೀಕಾರ ಭಾಷಣ ಕೂಡ ಬರೆದಿದ್ದೆ. ಲೇಖಕರಿಗೆ ಆತ್ಮವಿಶ್ವಾಸ ಬಹಳ ಮುಖ್ಯ ಎಂದು ಬಾನು ಮುಷ್ತಾಕ್ ವಿವರಿಸಿದರು.
ಇಲ್ಲಿಯ ಅಸಮಾನತೆ ಮತ್ತು ತೊಂದರೆಗಳನ್ನು ವಿದೇಶದಲ್ಲಿ ಹೇಳುವ ಇಚ್ಛೆ ನನಗಿರಲಿಲ್ಲ. ಹೀಗಾಗಿ ಅಲ್ಲಿ ನಾನು ಎಷ್ಟು ಹೇಳಬೇಕೋ ಅಷ್ಟೇ ಹೇಳಿದೆ. ನಮ್ಮ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳೋಣ. ನಮ್ಮಲ್ಲಿ ಕಟ್ಟರ್ ಅಂತ ಕರೆಯಬಹುದಾದವರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಅದೃಷ್ಟವಶಾತ್ ಅಂಥವರ ಸಂಖ್ಯೆ ಜಾಸ್ತಿ ಇಲ್ಲ. ಹೀಗಾಗಿ ನೆಮ್ಮದಿಯಾಗಿದ್ದೇವೆ ಎಂದು ಬಾನು ಮುಷ್ತಾಕ್ ಹೇಳಿದರು.
ಬೇರೆ ದೇಶಗಳಲ್ಲಿ ಅಗಾಧವಾದ ಸಾಹಿತ್ಯಪ್ರೀತಿಯಿದೆ. ಎಲ್ಲರೂ ಪುಸ್ತಕಗಳನ್ನು ಓದುತ್ತಾರೆ. ಪುಸ್ತಕಗಳನ್ನು ಪ್ರೀತಿಸುತ್ತಾರೆ. ನಮ್ಮ ಸಾಹಿತ್ಯಕೃತಿಗಳು ಅನುವಾದವಾದಾಗ ಮಾತ್ರ ಅಂಥವರನ್ನು ತಲುಪಲು ಸಾಧ್ಯ. ನಮ್ಮಲ್ಲಿ ಅನುವಾದಕರು ಹೆಚ್ಚಬೇಕು. ಅನುವಾದಕ್ಕೆ ಹತ್ತಿರವಿರುವ ಪತ್ರಕರ್ತರು ಭಾಷಾಂತರ ಕಾರ್ಯದಲ್ಲಿ ತೊಡಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇಂಗ್ಲೆಂಡಿನಲ್ಲಿ ಸೃಜನಶೀಲ ಬರಹವನ್ನು ಕಲಿಸುವ ಕಾಲೇಜುಗಳಿವೆ. ಅದೊಂದು ಪಠ್ಯದ ವಿಷಯವೂ ಆಗಿದೆ. ಆದರೆ ಅಲ್ಲಿ ಲೇಖಕರಿಗೆ ಬದ್ಧತೆ ಬೇಕಾಗಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲದವರ ಪರವಾಗಿ, ನೊಂದವರ ಪರವಾಗಿ, ಬಲಹೀನರ ಪರವಾಗಿ, ಅಧಿಕಾರದ ವಲಯದಿಂದ ದೂರ ಇರುವವರ ಪರವಾಗಿ ನಿಲ್ಲುವುದು ಲೇಖಕನಿಗೆ ಇರಬೇಕಾದ ಬದ್ಧತೆ ಎಂದು ನಾನು ಅವರಿಗೆ ಹೇಳಿದೆ. ನಾವೆಲ್ಲ ಅಂಥ ಬದ್ಧತೆಯಿಂದಲೇ ಬರೆಯುತ್ತಿದ್ದೇವೆ ಎಂದು ಬಾನು ಮುಷ್ತಾಕ್ ತಿಳಿಸಿದರು.
ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಬಾನು ಮುಷ್ತಾಕ್ ಪತ್ರಕರ್ತರಾಗಿ, ಹೋರಾಟಗಾರ್ತಿಯಾಗಿ, ರಾಜಕಾರಣಿಯಾಗಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ರಾಜಕೀಯಕ್ಕೆ ಬಂದ ನಾಯಕರಿಂದ ಭ್ರಮನಿರಸನಗೊಂಡು ರಾಜಕಾರಣದಿಂದ ದೂರ ಉಳಿದಿದ್ದಾರೆ. ನಾವು ಸುವರ್ಣಸಾಧಕಿ ಪ್ರಶಸ್ತಿಯ ಆಯ್ಕೆಯಲ್ಲಿದ್ದಾಗ ಕೇಳಿಬಂದ ಮೊದಲ ಹೆಸರು ಅವರದ್ದು ಎಂದರು.
ಕನ್ನಡಪ್ರಭದ ಸಿಬ್ಬಂದಿಯ ಜತೆ ಬಾನುಮುಷ್ತಾಕ್ ಸಂವಾದ ನಡೆಸಿ ತನ್ನ ನಿಲುವು, ನಡೆದು ಬಂದ ದಾರಿ ಮತ್ತು ಮುಂದಿನ ಕೃತಿಗಳ ಕುರಿತು ಮಾತನಾಡಿದರು.