ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸರಕಾರಿ ಕಲಾ ಕಾಲೇಜು, ವಿಜ್ಞಾನ ಕಾಲೇಜು ಹಾಗೂ ಎಂಸಿಇ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ಮಳೆಯ ಅಡ್ಡಿಯಾದರೂ ಯಾವುದನ್ಮು ಲೆಕ್ಕಿಸದೇ ಕ್ರಿಕೆಟ್ ಆಟೋಟ ಮುಂದುವರಿಸಿದರು.ಭಾನುವಾರ ಸಂಜೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಹಾಸನ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಅವರು ಎರಡನೇ ದಿನದ ಕ್ರಿಕೆಟ್ ಕ್ರೀಡಾಕೂಟದ ಮೈದಾನಕ್ಕೆ ಆಗಮಿಸಿ ಶುಭಹಾರೈಸಿದರು. ನಂತರ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಹಾಸನದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸಿದ್ದು, ತಮ್ಮ ಉತ್ತಮ ಪ್ರದರ್ಶನ ನೀಡುವ ತಂಡಕ್ಕೆ ಬಹುಮಾನ ಸಿಗಲಿದೆ. ಜಿಲ್ಲೆಯ ಕ್ರೀಡಾಕೂಟ ಯಶಸ್ವಿ ಆಗಲೆಂದು ಶುಭಹಾರೈಸಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆರೋಗ್ಯ ಮೇಳ, ಕ್ರೀಡಾಕೂಟದಂತಹ ಹಲವಾರು ಕಾರ್ಯಕ್ರಮವನ್ನು ಪತ್ರಕರ್ತರು ಮಾಡಿಕೊಂಡು ಬರುತ್ತಿರುವುದು ಉತ್ತಮವಾಗಿದೆ. ಯಾವಾಗಲೂ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಬಿಡುವಿನ ಸಮಯದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿದ್ದಾರೆ. ಬೇರೆ ಜಿಲ್ಲೆಗಳಿಂದ ಕ್ರೀಡಾಪಟುಗಳು ಬಂದಿದ್ದು, ಪ್ರತಿವರ್ಷ ವಿಶೇಷವಾಗಿ ಇಂತಹ ಕ್ರೀಡೆಯನ್ನು ಹಮ್ಮಿಕೊಳುತ್ತಾ ಬಂದಿದ್ದಾರೆ ಎಂದರು. ರಾಜ್ಯದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಎಂದರೇ ವಿಶೇಷ ಜೊತೆಗೆ ಒಗ್ಗಟ್ಟಿನಿಂದ ಎಲ್ಲಾ ಕಾರ್ಯಕ್ರಮ ಮಾಡಿಕೊಂಡು ಹೋಗುತ್ತಾರೆ. ಇಂತಹ ಕಾರ್ಯಕ್ರಮ ಸದಾಕಾಲ ಮಾಡುತ್ತಿರಲಿ ಎಂದು ಹಾರೈಸಿದರು.ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಸ್ಫೂರ್ತಿಗೆ ಕ್ರೀಡೆ ಅವಶ್ಯಕ. ದೇಶದಲ್ಲಿ ಕ್ರಿಕೆಟ್‌ಗೆ ಸ್ವಾತಂತ್ರ್ಯ ಪೂರ್ವದಿಂದಲೂ ಜನಪ್ರಿಯತೆ ಗಳಿಸಿದ್ದು, ಕೋಟ್ಯಂತರ ಮಂದಿ ನೆಚ್ಚಿನ ಕ್ರೀಡೆಯಾಗಿದೆ. ಭಾರತ ತಂಡವು ಉತ್ತಮ ಸಾಧನೆ ಮಾಡಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಐಪಿಎಲ್ ನಡೆಯುತ್ತಿರುವುದನ್ನು ಕಂಡಿದ್ದೇವೆ. ಬೇಸಿಗೆ ಕಾಲದಲ್ಲಿ ಹೊಲಗದ್ದೆ ಬಯಲುಗಳಲ್ಲಿ ಕ್ರಿಕೆಟ್ ಆಡುವುದನ್ನು ಕಂಡಿದ್ದೇವೆ ಎಂದರು. ಪ್ರತಿದಿನ ವ್ಯಾಯಾಮ ಮಾಡಿದಲ್ಲಿ ಕ್ರೀಡೆಯಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ಸಲಹೆ ನೀಡಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿ, ರಾಜ್ಯ ಪತ್ರಕರ್ತರ ಸಂಘದ ಕ್ರೀಡಾಕೂಟವು ನಗರದ ಮೂರು ಮೈದಾನದಲ್ಲಿ ಆಯೋಜನೆ ಮಾಡಿದ್ದು, ಎಲ್ಲರೂ ಉತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ತಮ್ಮದಾಗಿಸಿಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನಗೌಡ, ಕೆಯುಡಬ್ಲ್ಯೂಜೆ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಬಂಡಿಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಸಿ. ಶಶಿಧರ್, ಸಣ್ಣಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಎನ್. ರವಿಕುಮಾರ್, ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಕೆ.ಆರ್. ಮಂಜುನಾಥ್, ಲೀಲಾವತಿ, ಬಿ.ಆರ್.ಉದಯ್ ಕುಮಾರ್, ಪ್ರಸನ್ನಕುಮಾರ್, ಉಪಾಧ್ಯಕ್ಷ ಮೋಹನ್, ಹರೀಶ, ಕಾರ್ಯದರ್ಶಿ ಸಂತೋಷ್, ಪಿ.ಎ. ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.