ಪತ್ರಕರ್ತರ ಪ್ರಾಮಾಣಿಕ ವರದಿ ಅಧಿಕಾರದಲ್ಲಿದ್ದವರ ಎಚ್ಚರಿಸಬೇಕು: ಭಂಡಾರಿ ಶ್ರೀನಿವಾಸ್

| Published : Aug 05 2025, 11:45 PM IST

ಪತ್ರಕರ್ತರ ಪ್ರಾಮಾಣಿಕ ವರದಿ ಅಧಿಕಾರದಲ್ಲಿದ್ದವರ ಎಚ್ಚರಿಸಬೇಕು: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಪತ್ರಕರ್ತರು ಮಾಡುವ ಪ್ರಾಮಾಣಿಕ ವರದಿ ಅಧಿಕಾರದಲ್ಲಿರುವವರನ್ನು ಎಚ್ಚರಿಸು ವಂತಿರಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

- ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಪತ್ರಕರ್ತರು ಮಾಡುವ ಪ್ರಾಮಾಣಿಕ ವರದಿ ಅಧಿಕಾರದಲ್ಲಿರುವವರನ್ನು ಎಚ್ಚರಿಸು ವಂತಿರಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್, ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪತ್ರಕರ್ತರ ಅನೇಕ ಬೇಡಿಕೆಗಳಿದ್ದು ತಮ್ಮ ಪುರಸಭೆ ವ್ಯಾಪ್ತಿಯಲ್ಲಿ ಪತ್ರಕರ್ತರ ಭವನ ಮತ್ತು ನಿವೇಶನ ಇಲ್ಲದ ಪತ್ರಕರ್ತರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ತಮ್ಮ ಸಕ್ರಿಯ ರಾಜಕಾರಣದಲ್ಲಿ ಪತ್ರಕರ್ತರ ಸಹಕಾರದಿಂದ ತಾವು ಈ ಮಟ್ಟಕ್ಕೆ ಬೆಳೆದಿದ್ದು, ಪತ್ರಕರ್ತರಿಗೆ ಋಣಿ ಆಗಿರುತ್ತೇನೆ ಎಂದರು. ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಲು, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಪತ್ರಿಕಾ ರಂಗವನ್ನು ನಾಲ್ಕನೆಯ ಅಂಗ ಎಂದು ಕರೆಯಲಾಗಿದೆ. ಡಿವಿಜಿ ಯವರು ನಾಡಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಚಿಂತಕರಾಗಿ ಮತ್ತು ಪತ್ರಕರ್ತರೂ ಆಗಿ ಕೆಲಸ ಮಾಡಿದವರು. ಪತ್ರಕರ್ತರ ಬೇಡಿಕೆ ಯಾದ ಕ್ಷೇಮನಿಧಿ ಸ್ಥಾಪಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಪತ್ರಕರ್ತರು ತಮ್ಮ ಹಕ್ಕನ್ನು ಕೇಳಿ ಪಡೆಯು ವಂತಾಗಿರುವುದು ವಿಪರ್ಯಾಸ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಗಳು ಮುಂದಾಳತ್ವ ವಹಿಸಿ ರುವವರಿಗೆ ಮಾತ್ರ ಉಪಯೋಗ ಆಗುತ್ತಿದೆ. ಅವರಿಗೆ ಆ ಸ್ಥಾನಕ್ಕೆ ಕಳುಹಿಸಿದ ಸಾಮಾನ್ಯ ಪತ್ರಕರ್ತರಿಗೆ ಪ್ರಯೋಜನ ಇಲ್ಲದಾಗಿದೆ. ಸ್ಥಳೀಯ ಪತ್ರಕರ್ತರಿಗೆ ಕನಿಷ್ಠ ಕ್ಷೇಮ ನಿಧಿ, ಬಸ್ ಪಾಸ್ ವ್ಯವಸ್ಥೆ ಮಾಡಿ ಕೊಡಲು ಸರ್ಕಾರ ಚಿಂತಿಸಬೇಕು. ಎಲ್ಲರನ್ನೂ ಒಂದಾಗಿಸಿ ಮುನ್ನಡೆವ ನಾಯಕರ ಅವಶ್ಯಕತೆ ಸಂಘಟನೆ ಅಧ್ಯಕ್ಷರಾದವರಿಗೆ ಇರಬೇಕು. ಈ ಗುಣ ನಮ್ಮ ಜಿಲ್ಲಾಧ್ಯಕ್ಷ ಸಿ.ಎಚ್.ಮೂರ್ತಿ ಅವರಿಗಿದೆ, ತಾವು ಆಸಕ್ಕಿ ವಹಿಸಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಸಾರ್ಥಕ ಎನಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಸಿ.ಎಚ್. ಮೂರ್ತಿ ಮಾತನಾಡಿ, ಸಮಾರಂಭದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯ ವಾದ ತಿಳಿಸಿ ಪತ್ರಕರ್ತರಿಗೆ ಇದುವರೆಗೂ ರಾಜ್ಯ ಸರ್ಕಾರ ಯಾವುದೇ ರೀತಿ ಸಹಕಾರ ನೀಡಿಲ್ಲ, ಸರ್ಕಾರ ನೀಡುತ್ತಿರುವ ಬಸ್ ಪಾಸ್ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಿಗುತ್ತಿಲ್ಲ. ಉನ್ನತ ಸ್ಥಾನದಲ್ಲಿರುವವರು ತಮ್ಮ ವೈಯುಕ್ತಿಕ ಏಳಿಗೆಗೆ ಸಂಘ ಬಳಸಿಕೊಂಡು ನಿಜವಾದ ಪತ್ರಕರ್ತರನ್ನು ಕಡೆಗಣಿಸಿದ್ದಾರೆ. ಈ ಮನೋಭಾವ ಬದಲಾಗಿ ಪತ್ರಕರ್ತರೆಲ್ಲಾ ಒಂದು ಎಂದು ಪರಿಗಣಿಸಬೇಕು ಎಂದರು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಭರತನಾಟ್ಯ ಕಲಾವಿದರು, ಯೋಗ ಪಟುಗಳು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮತ್ತು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ, ವಕೀಲ ಹಾಗೂ ಪತ್ರಕರ್ತ ಸುಧೀರ್ ಕುಮಾರ್ ಮೊರಳ್ಳಿ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಜಿಲ್ಲಾ ಗೌರವಾಧ್ಯಕ್ಷ ಕೆ.ವಿ. ವಾಸು, ತಾಲೂಕು ಕುಳುವ ಸಮಾಜದ ಅಧ್ಯಕ್ಷ ಎ.ಜಿ.ಗಿರೀಶ್, ಬೀರೂರು ಪುರಸಭೆ ಮಾಜಿ ಅಧ್ಯಕ್ಷ ವನಿತಾ ಮಧು, ರಾಷ್ಟ್ರೀಯ ಮಂಡಳಿ ಸದಸ್ಯ ಕೆ.ಎಸ್. ಸೋಮಶೇಖರ್, ತಾಲೂಕು ಅಧ್ಯಕ್ಷರಾದ ಟಿ.ಜಿ.ಲೋಕೇಶಪ್ಪ, ಜಿನೇಶ್ ಇರ್ವತ್ತೂರು, ಬಿ.ಲೋಕೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಪ್ರಕಾಶ್, ಹಿರೆಮಗಳೂರು ಪುಟ್ಟಸ್ವಾಮಿ, ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಇದ್ದರು.

4ಕೆಕೆಡಿಯು1.

ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್, ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಡೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು.