ಸಾರಾಂಶ
ಬಳ್ಳಾರಿ: ಪತ್ರಕರ್ತರು ವರದಿಗಾರಿಕೆ ಜತೆ ಸಾಹಿತ್ಯ, ಸಂಗೀತ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೆಲಸದ ಒತ್ತಡದ ಆಯಾಸ ಕಡಿಮೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ಕಲಾವಿದ ಹಾಗೂ ಪತ್ರಿಕಾ ಛಾಯಗ್ರಾಹಕ ಪುರುಷೋತ್ತಮ ಹಂದ್ಯಾಳು ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ದೇಶದ ಅಭಿವೃದ್ಧಿಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜತೆ ಮಾಧ್ಯಮ ಕ್ಷೇತ್ರ ಸಹ ನಾಲ್ಕನೇ ಸ್ತಂಭವಾಗಿ ಶ್ರಮಿಸುತ್ತಿದೆ. ಈ ಕ್ಷೇತ್ರದಲ್ಲಿ ದುಡಿಯುವವರು ಸದಾ ಒತ್ತಡ ಎದುರಿಸುತ್ತಾರೆ. ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆಯಾಸ ನಿವಾರಣೆಯಾಗಲಿದೆ. ಚುನಾವಣೆಯಾಗಲಿ, ಅಭಿವೃದ್ಧಿ ಕಾರ್ಯವಾಗಲಿ, ಮಾಧ್ಯಮದವರ ತೊಡಗಿಸಿಕೊಳ್ಳುವಿಕೆ ಸ್ಮರಣೀಯವಾಗಿದೆ. ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಪತ್ರಕರ್ತರು ತಮ್ಮ ವರದಿಗಾರಿಕೆಯ ಮೂಲಕ ಗಮನ ಸೆಳೆದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ದಿಸೆಯಲ್ಲೂ ಬಳ್ಳಾರಿ ಪತ್ರಕರ್ತರ ಸೇವೆ ಅನನ್ಯವಾಗಿದೆ ಎಂದು ಸ್ಮರಿಸಿದರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್. ವೀರಭದ್ರಗೌಡ ಹಾಗೂ ಸನ್ಮಾನಿತ ಪುರುಷೋತ್ತಮ ಹಂದ್ಯಾಳು ಮಾತನಾಡಿದರು. ವಾರ್ತಾ ಇಲಾಖೆಯ ಗುರುರಾಜ್ ಇದ್ದರು. ನಿವೃತ್ತ ವಾರ್ತಾಧಿಕಾರಿ ಚೋರನೂರು ಕೊಟ್ರಪ್ಪ, ಹಿರಿಯ ಪತ್ರಕರ್ತ ಎಂ. ಅಹಿರಾಜ್, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಪಾಲ್ಗೊಂಡಿದ್ದರು.ಎಚ್.ಎಂ. ಮಹೇಂದ್ರಕುಮಾರ್, ವೆಂಕೋಬಿ ಸಂಗನಕಲ್ಲು, ಲಕ್ಷ್ಮೀ ಪವನ್ ಕುಮಾರ್ ಹಾಗೂ ವೀರೇಶ್ ಕರೂರು ಕಾರ್ಯಕ್ರಮ ನಿರ್ವಹಿಸಿದರು.