ಪತ್ರಕರ್ತರು ಯಾವುದೇ ಒಂದು ಗುಂಪಿಗೆ ಅಥವಾ ಸಿದ್ಧಾಂತಕ್ಕೆ ಮಾರು ಹೋಗಬಾರದು. ಯಾರ ಪರವಾಗಿದ್ದೇವೆ ಎನ್ನುವ ಸ್ಪಷ್ಟ ಅರಿವು ಪತ್ರಕರ್ತರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯನ ಪರವಾಗಿ ಇದೆಯಾ ಎನ್ನುವುದನ್ನು ಗಮನಿಸುವ ಮೂಲಕ ವೃತ್ತಿ ಧರ್ಮವನ್ನು ಕಾಪಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪತ್ರಕರ್ತರು ಯಾವುದೇ ಒಂದು ಗುಂಪಿಗೆ ಅಥವಾ ಸಿದ್ಧಾಂತಕ್ಕೆ ಮಾರು ಹೋಗಬಾರದು. ಯಾರ ಪರವಾಗಿದ್ದೇವೆ ಎನ್ನುವ ಸ್ಪಷ್ಟ ಅರಿವು ಪತ್ರಕರ್ತರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯನ ಪರವಾಗಿ ಇದೆಯಾ ಎನ್ನುವುದನ್ನು ಗಮನಿಸುವ ಮೂಲಕ ವೃತ್ತಿ ಧರ್ಮವನ್ನು ಕಾಪಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.ಶುಕ್ರವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಆಯೋಜಿಸಿದ್ದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬಹಳ ವೇಗವಾಗಿ ಬದಲಾಗುತ್ತಿದ್ದು. ಮಾಧ್ಯಮವೂ ಬೆಳೆಯುತ್ತಿದ್ದು, ಬದಲಾವಣೆಯೂ ಆಗುತ್ತಿದೆ. ಆದರೆ, ಯಾರ ಪರವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪುತ್ತಿವೆಯೇ ಅಥವಾ ಇಲ್ಲವೇ ಎನ್ನುವುದನ್ನು ಗಮನಿಸುತ್ತಾ, ಶೋಷಿತರ, ದಮನಿತರ, ಧ್ವನಿಯಿಲ್ಲದವರ ಪ್ರತಿನಿಧಿಯಾಗಿ ಜವಾಬ್ದಾರಿ ನಿಭಾಯಿಸಬೇಕು ಎಂದರು.ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧೀಜಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು. ಈ ಅಸಮಾನತೆ ಹೋಗದೆ ಹೋದರೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್ ಹೇಳಿದ್ದರು ಎಂದು ಉಲ್ಲೇಖಿಸಿದರು.
ಪ್ರಸ್ತುತ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು. ಯಾವುದೇ ಸಿದ್ಧಾಂತಕ್ಕೆ ಮಾರುಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು ಎಂದರು.ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಮಾತನಾಡಿ, ಈ ವರ್ಷ ಪ್ರಶಸ್ತಿಗಳನ್ನು 31 ಮಂದಿಗೆ ನೀಡಲಾಗಿದೆ. ಮುಂದಿನ ವರ್ಷ ಈ ಸಂಖ್ಯೆಯನ್ನು 35ಕ್ಕೆ ಹೆಚ್ಚಳ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಇತರರು ಇದ್ದರು. ಶುದ್ಧ ಭಕ್ತಿ ಇದ್ದರೆ ಮಾತ್ರವೇ ದೇವರು ಒಲಿಯುವ:ಎಲ್ಲಾ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮೈಸೂರು ತಾಲೂಕು ವರಕೋಡು ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನಾ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ಭಕ್ತಿ ಪರಿಶುದ್ಧವಾಗಿರಬೇಕು. ಅಲ್ಲದೆ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ ಎಂದರು.ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿದ್ದಾರೆ. ಬೀರೇಶ್ವರಸ್ವಾಮಿ ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಅವರು ಪ್ರಾರ್ಥಿಸಿದರು.ಭಕ್ತಿಯು ಪರಿಶುದ್ಧವಾಗಿರಬೇಕು. ಯಾವ ಧರ್ಮವೂ ದ್ವೇಷ ಮಾಡುವುದನ್ನು ಭೋದಿಸಿಲ್ಲ. ಇನ್ನೊಬ್ಬರನ್ನು ದ್ವೇಷಿಸುವುದು ಭಕ್ತಿಯೇ ಅಲ್ಲ. ಶುದ್ಧವಾದ ಭಕ್ತಿ ಇಲ್ಲದೆ ಹೋದರೆ ಎಷ್ಟೇ ಪೂಜೆ ಮಾಡಿದರೂ ಸಾರ್ಥಕ ಆಗುವುದಿಲ್ಲ. ದೇವನೊಬ್ಬ, ನಾಮ ಹಲವು. ದೇವರು ಗುಡಿಯಲ್ಲಿ ಮಾತ್ರ ಇರುತ್ತಾನೆ ಎಂದು ನಂಬುವುದು ಸರಿಯಾದ ನಂಬಿಕೆಯಲ್ಲ. ಶುದ್ಧವಾದ ಭಕ್ತಿಯಿಂದ ಪೂಜಿಸುವವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ದೇವರು ನಿಮ್ಮಲ್ಲೇ ಇದ್ದಾನೆ. ದೇವರು ನಿಮಗೆ ಒಲಿಯಬೇಕೆಂದರೆ ಯಾರಿಗೂ ಕೆಟ್ಟದನ್ನು ಬಯಸಬಾರದು ಎಂದು ಅವರು ತಿಳಿಸಿದರು.