ವಿದ್ಯಾರ್ಥಿಗಳಲ್ಲಿ ಚಟುವಟಿಕೆ, ಸಂಗ್ರಹಣೆ, ಚಿಕಿತ್ಸೆ ಹಾಗೂ ಕುತೂಹಲದ ಪ್ರವೃತ್ತಿಗಳಿರುತ್ತವೆ.
ಕನ್ನಡಪ್ರಭ ವಾರ್ತೆ ಮೈಸೂರುಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಪ್ರಶಿಕ್ಷಣಾರ್ಥಿಗಳು ಅದನ್ನು ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಪ್ರೀತಿಯಿಂದ ಗೌರವಿಸಬೇಕು ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ರಾಜಲಕ್ಷ್ಮಿ ಕಿವಿಮಾತು ಹೇಳಿದರು.ಸುತ್ತೂರಿನಲ್ಲಿ ಜೆಎಸ್‌ಎಸ್ ಶಿಕ್ಷಣ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪರಿಚಯಾತ್ಮಕ ಹಾಗೂ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ-2026 ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಚಟುವಟಿಕೆ, ಸಂಗ್ರಹಣೆ, ಚಿಕಿತ್ಸೆ ಹಾಗೂ ಕುತೂಹಲದ ಪ್ರವೃತ್ತಿಗಳಿರುತ್ತವೆ. ಶಿಕ್ಷಕನಾದವನು ಅದನ್ನು ಗಮನಿಸಿ, ಅದಕ್ಕೆ ತಕ್ಕಂತೆ ಬೋಧಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಅತಿಥಿಯಾಗಿದ್ದ ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನ ಪ್ರವಾಚಕ ಡಿ.ಆರ್. ಅಮಿತ್, ದೇಶಕ್ಕೆ ಸೈನಿಕರು ಹಾಗೂ ಶಿಕ್ಷಕರು ಬಹಳ ಮುಖ್ಯ, ಸೈನಿಕರು ರಾಷ್ಟ್ರವನ್ನು ರಕ್ಷಿಸಿದರೆ, ಶಿಕ್ಷಕರು ದೇಶವನ್ನು ಕಟ್ಟುತ್ತಾರೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ದೇಶವನ್ನು ಕಟ್ಟಲು ಬೇಕಾದ ಮಾನವೀಯತೆ, ದೇಶಭಕ್ತಿ ಸೇವಾಮನೋಭಾವ ಮುಂತಾದ ಗುಣಗಳನ್ನು ಬೆಳೆಸುವುದರ ಜೊತೆಗೆ ಶಿಕ್ಷಕರು ವೈಯಕ್ತಿಕ ಭಿನ್ನತೆ ಅರಿತು, ಬದಲಾದ ಕಾಲಮಾನಕ್ಕೆ ತಕ್ಕಂತೆ ಬೋಧಿಸಲು ವಿಶಿಷ್ಟ ಕೌಶಲ್ಯ ಕರಗತಮಾಡಿಕೊಳ್ಳಬೇಕು ಎಂದರು.ಮೈಸೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನ ಪ್ರವಾಚಕ ಲಕ್ಷ್ಮೀಕಾಂತ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಹಲವು ಭಾಷೆಗಳ ಕಲಿಕೆ ಇಂದು ಅನಿವಾರ್ಯವಾಗಿದೆ, ಪೈಪೋಟಿಯ ಈ ದಿನಗಳಲ್ಲಿ ಶಿಕ್ಷಕರು ಸದಾಕಾಲ ವಿದ್ಯಾರ್ಥಿಗಳಾಗಿರಬೇಕು. ಕೆಲಸ ಮಾಡುವ ವ್ಯಕ್ತಿಗೆ ಬೇರೆ ಕೆಲಸವೇ ವಿಶ್ರಾಂತಿ ಎನ್ನುವ ಮನೋಭಾವ ಇರಬೇಕು ಎಂದರು.ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಗಳ ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ ಮಾತನಾಡಿ, ಆದರ್ಶ ಶಿಕ್ಷಕರನ್ನು ನಿರ್ಮಾಣಮಾಡುವುದು ನಮ್ಮ ಸಂಸ್ಥೆಯ ಗುರಿ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ. ಮಹೇಶ್ ಅವರು ಶ್ರೀಗಳ ಜ್ಞಾನಾನ್ನ ದಾಸೋಹವನ್ನು ಸಮಾಜಕ್ಕೆ ನೀಡುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿದೆ ಬೆಳಕಾಗಿದ್ದಾರೆ, ಪೂಜ್ಯರ ಆದರ್ಶಗಳನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.ಈ ವೇಳೆ ಕಾಲೇಜಿನ ಗೋಡೆ ಪತ್ರಿಕೆಯಾದ ಗೋಪ ವನ್ನು ಅತಿಥಿಗಳು ಅನಾವರಣಗೊಳಿಸಿದರು. ಇದರ ಸಂಯೋಜಕ ಜಿ.ಎನ್. ಮಂಜುನಾಥ್‌ಅವರು, ಇದು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣೆಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ಆದರ್ಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಾ ಮತ್ತು ತಂಡದವರು ಪ್ರಾರ್ಥಿಸಿದರು. ಶುಭಾ ಸ್ವಾಗತಿಸಿದರು. ನಿತ್ಯಾರಾಣಿ ವಂದಿಸಿದರು. ಗೌರಮ್ಮ ಕಾರ್ಯಕ್ರಮ ನಿರೂಪಿಸಿದರು.