ಜೆಎಸ್ಎಸ್ ಉನ್ನತ ಶಿಕ್ಷಣ, ಸಂಶೋಧನಾ ಅಕಾಡೆಮಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಅತ್ಯುನ್ನತ ರ್‍ಯಾಂಕ್‌

| Published : Jun 14 2024, 01:02 AM IST

ಜೆಎಸ್ಎಸ್ ಉನ್ನತ ಶಿಕ್ಷಣ, ಸಂಶೋಧನಾ ಅಕಾಡೆಮಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಅತ್ಯುನ್ನತ ರ್‍ಯಾಂಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಜೆಎಸ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಅಕಾಡೆಮಿಯ ಕೈಗೆಟುಕುವ ಮತ್ತು ಶುದ್ಧ ಶಕ್ತಿ ವಿಷಯದಲ್ಲಿ 12ನೇ ಸ್ಥಾನ, ಬಡತನ ನಿರ್ಮೂಲನೆ ವಿಷಯದಲ್ಲಿ 21ನೇ ಸ್ಥಾನ, ಭೂಮಿಯ ಮೇಲಿನ ಜೀವನ ವಿಷಯದಲ್ಲಿ 49ನೇ ಸ್ಥಾನ, ಶುದ್ಧ ಜಲ ಮತ್ತು ನೈರ್ಮಲ್ಯ ವಿಷಯದಲ್ಲಿ 60ನೇ ಸ್ಥಾನ ಹಾಗೂ ಜಬ್ದಾರಿಯುತ ಉತ್ಪಾದನೆ ಮತ್ತು ಬಳಕೆ ವಿಷಯದಲ್ಲಿ 78ನೇ ಸ್ಥಾನವನ್ನು ಗಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ್‍ಯಾಂಕಿಂಗ್- 2024ರಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳು ವಿಷಯಕ್ಕೆ ಅತ್ಯುನ್ನತ ರ್‍ಯಾಂಕ್ ಲಭಿಸಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೊತ್ಸವ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಗುಣಮಟ್ಟದ ಬೋಧನಾ ಕಾರ್ಯ, ಅತ್ಯುನ್ನತ ಸಂಶೋಧನಾ ಚಟುವಟಿಕೆ ಮತ್ತು ಸಾಮಾಜಿಕ ಆರೋಗ್ಯ ಸೇವೆ ವಿಷಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಫಲಿತಾಂಶ ದೊರೆತಿದೆ ಎಂದರು.

ಥೈಲ್ಯಾಂಡ್ ನ ಬ್ಯಾಂಕಾಂಕ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಗೆ ಪ್ರಶಸ್ತಿ ಘೋಷಿಸಲಾಗಿದೆ. 2024ರ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಬಹುಮುಖ್ಯವಾದ ಗುರಿಯಾದ ಉತ್ತಮ ಆರೋಗ್ಯ ಮತ್ತು ಕ್ಷೇಮ ವಿಷಯದಲ್ಲಿ ಪ್ರಪಂಚದ ಮೊದಲನೇ ಸ್ಥಾನ ಲಭಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಈ ಪ್ರಶಸ್ತಿಗಾಗಿ 115 ದೇಶಗಳಿಂದ 497 ವಿಶ್ವ ವಿದ್ಯಾನಿಲಯಗಳು ಭಾಗವಹಿಸಿದ್ದವು. ಭಾರತದಿಂದ ಸುಮಾರು 115 ವಿವಿಗಳು ಪಾಲ್ಗೊಂಡಿದ್ದು, ಇದರಲ್ಲಿ ಕರ್ನಾಟದಿಂದ 12 ವಿವಿಗಳು ಭಾಗವಹಿಸಿದ್ದವು. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 9 ವಿಭಾಗದಲ್ಲಿ ಜೆಎಸ್ಎಸ್ ಸಂಸ್ಥೆ ಸ್ಪರ್ಧೆ ಮಾಡಿತ್ತು. ಅದರಲ್ಲಿ 7 ವಿಭಾಗದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ ಎಂದರು.

ಜೆಎಸ್ಎಸ್ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಅಕಾಡೆಮಿಯ ಕೈಗೆಟುಕುವ ಮತ್ತು ಶುದ್ಧ ಶಕ್ತಿ ವಿಷಯದಲ್ಲಿ 12ನೇ ಸ್ಥಾನ, ಬಡತನ ನಿರ್ಮೂಲನೆ ವಿಷಯದಲ್ಲಿ 21ನೇ ಸ್ಥಾನ, ಭೂಮಿಯ ಮೇಲಿನ ಜೀವನ ವಿಷಯದಲ್ಲಿ 49ನೇ ಸ್ಥಾನ, ಶುದ್ಧ ಜಲ ಮತ್ತು ನೈರ್ಮಲ್ಯ ವಿಷಯದಲ್ಲಿ 60ನೇ ಸ್ಥಾನ ಹಾಗೂ ಜಬ್ದಾರಿಯುತ ಉತ್ಪಾದನೆ ಮತ್ತು ಬಳಕೆ ವಿಷಯದಲ್ಲಿ 78ನೇ ಸ್ಥಾನವನ್ನು ಗಳಿಸಿದೆ ಎಂದು ವಿವರಿಸಿದರು.

2008ರಲ್ಲಿ ಆರಂಭವಾದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಆರೋಗ್ಯಕರ ಶಿಕ್ಷಣ ಮತ್ತು ಸಂಶೋಧನೆಯನ್ನು ವರ್ಧನೆಗೊಳಿಸುವ ನಿಟ್ಟಿನಲ್ಲಿ ನಿರಂತರ ಸಮರ್ಪಣಾ ಮನೋಭಾವವನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಷಯದಲ್ಲಿ ಹೊಸ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಇಲ್ಲಿವರೆಗೂ ಕಾಪಾಡಿಕೊಂಡು ಬಂದಿರುವ ಬದ್ಧತೆಯಿಂದ ಇಂತಹ ಪ್ರಶಸ್ತಿಗಳು ಲಭ್ಯವಾಗಿವೆ. ಸಂಸ್ಥೆಯು ಇನ್ನೂ ಮುಂದೆಯೂ ಅತ್ಯುತ್ತಮ ಮಟ್ಟದಲ್ಲಿ ತನ್ನ ಕಾರ್ಯಕ್ಷಮೆತೆಯನ್ನು ಕಾಪಾಡಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತದೆ ಎಂದರು.

ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಾತನಾಡಿ, ಜೆಎಸ್ಎಸ್ ಮಹಾ ವಿದ್ಯಾಪೀಠದ ಕೀರಿಟಕ್ಕೆ ನಮ್ಮ ಎಲ್ಲಾ ಸಂಸ್ಥೆಗಳು ಇಂತಹ ಪ್ರಶಸ್ತಿಗಳ ಗರಿಗಳನ್ನು ತೊಡಿಸುತ್ತಾ ಹೋಗಲಿ. ಎಲ್ಲಾ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಹಾಗೂ ಆರೋಗ್ಯಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಣೆ ಮಾಡಲಿ ಎಂದು ಆಶಿಸಿದರು.

ಜೆಎಸ್ಎಸ್ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ. ಸುರೀಂದರ್ ಸಿಂಗ್ ಅನ್ ಲೈನ್ ಮೂಲಕ ಮಾತನಾಡಿದರು. ಕುಲಸಚಿವ ಡಾ.ಬಿ. ಮಂಜುನಾಥ್, ಜೆಎಸ್ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಬಸವನಗೌಡಪ್ಪ, ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಪಿ. ಮಧು ಇದ್ದರು.

2027ಕ್ಕೆ ವರುಣ ಕ್ಯಾಂಪಸ್ ಕಾರ್ಯಾರಂಭ

ಮೈಸೂರು ತಾಲೂಕು ವರುಣ ಬಳಿ ನಿರ್ಮಾಣವಾಗುತ್ತಿರುವ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕ್ಯಾಂಪಸ್ 2027ಕ್ಕೆ ಕಾರ್ಯಾರಂಭ ಆಗಲಿದೆ. ಈ ಕ್ಯಾಂಪಸ್ ಜಾಗತಿಕ ಮಟ್ಟವನ್ನು ಹೊಂದಿರುತ್ತದೆ. ಸುಮಾರು 15 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಬೋಧಕ ವರ್ಗ ಮತ್ತು 4 ಸಾವಿರ ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ ಎಂದು ಕುಲಪತಿ ಡಾ. ಸುರೀಂದರ್ ಸಿಂಗ್ ತಿಳಿಸಿದರು.

ವಿಶ್ವದ ಯಾವುದೇ ರಾಷ್ಟ್ರದ ಉತ್ತಮ ಶಿಕ್ಷಣ ಸಂಸ್ಥೆಗಳು ಅಲ್ಲಿಗೆ ಬಂದು ತಮ್ಮ ಕೇಂದ್ರವನ್ನು ತೆರೆಯಬಹುದು. ಅಲ್ಲದೆ, ಆರೋಗ್ಯ, ಶಿಕ್ಷಣ, ಸಂಶೋಧನಗೆ ಸಂಬಂಧಪಟ್ಟ ಉದ್ಯಮಗಳು ಅಲ್ಲಿ ತಮ್ಮ ಕಾರ್ಯಚಟುವಟಿಕೆ ಆರಂಭಿಸಬಹುದು. ವರುಣ ಕ್ಯಾಂಪಸ್ ಅನ್ನು ಶಿಕ್ಷಣದೊಂದಿಗೆ ಉದ್ಯಮದ ಚಟುವಟಿಕೆ ಜೊತೆಯಾಗಿ ಸಾಗುವಂತೆ ಸಿದ್ಧಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಂದ ಮುಂಬರುವ ದಿನಗಳಲ್ಲಿ ಸಮಾಜ ಹಾಗೂ ವಿಶ್ವಕ್ಕೆ ಅಗತ್ಯ ಎನಿಸುವ ಸೇವಾ ಶ್ರಮಿಸುವ ಮುಂದಿನ ಪಿಳೀಗೆಯನ್ನು ಉತ್ತೇಜಿಸಲಾಗುತ್ತದೆ. ಜ್ಞಾನವು ಭರವಸೆಯ ದಾರಿ ದೀಪವಾಗಿ ಕಾರ್ಯ ನಿರ್ವಹಿಸುವ ಕಡೆ ಮಾನವೀಯತೆಯು ಸಮೃದ್ಧಿ ಮತ್ತು ಸಾಮರಸ್ಯದ ಮಾರ್ಗದರ್ಶನ ಮಾಡಲು ಸಹಕಾರಿಯಾಗುತ್ತದೆ.

- ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ