ಕನ್ನಡಪ್ರಭ ವಾರ್ತೆ ನಂಜನಗೂಡು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಧಾರ್ಮಿಕ ಪರಂಪರೆ ಮತ್ತು ಆಧುನಿಕ ಜಗತ್ತಿನ ಸಮನ್ವತೆಯ ಸೇತುವೆಯಾಗಿ ಮಠದ ಸೇವಾ ಕಾರ್ಯವನ್ನು ಆಧುನಿಕ ಜಗತ್ತಿಗೆ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ನಂಜನಗೂಡಿನ ನಾಗರೀಕರ ವತಿಯಿಂದ ಏರ್ಪಡಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಶತೋತ್ತರ ದಶಮಾನೋತ್ಸವ 110ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತ ದೇಶವು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಪರಂಪರೆಯ ಇತಿಹಾಸವನ್ನು ಗರ್ಭಂತರಿಸಿಕೊಂಡಿರುವ ಕಾರಣಕ್ಕೆ ಜಗತ್ತಿನ ಮುಂದುವರಿದ ದೇಶಗಳು ಕೂಡ ಭಾರತ ದೇಶದತ್ತ ತಿರುಗಿ ನೋಡುವಂತಾಗಿದೆ, ಇಲ್ಲಿನ ಸಾವಿರಾರು ಸಂತರು, ಋಷಿಮುನಿಗಳು, ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ರಂಗಗಳಲ್ಲಿ ತಪಶಕ್ತಿಯನ್ನು ಧಾರೆ ಎರೆದು ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ನಾಡಿನಲ್ಲಿ ಅನೇಕ ಮಠಮಾನ್ಯಗಳು ಜನರಿಗೆ ಧಾರ್ಮಿಕವಾಗಿ ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ವಿಸ್ತರಿಸಿರುವ ಕಾರಣದಿಂದಾಗಿ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿ ಜನರು ತಮ್ಮ ಸ್ವಂತ ಕಾಲ ಮೇಲೆ ನಿಂತು ಜೀವನ ಸಾಗಿಸುವ ಶಕ್ತಿ ಬಂದಿದೆ ಎಂದರು.ಯಾವುದೇ ಮಠದ ಪರಂಪರೆಯು ಧಾರ್ಮಿಕ ಕ್ಷೇತ್ರವನ್ನು ಅನುಸರಿಸಿ ಆಯಾ ಕಾಲಕ್ಕೆ ಅನುಸಾರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಆರೋಗ್ಯ ಕ್ಷೇತ್ರದಲ್ಲಿ ಜನತೆಗೆ ಅಗತ್ಯವಾದ ಸೇವೆಯನ್ನು ಒದಗಿಸುವುದು ಪ್ರಮುಖವಾಗುತ್ತದೆ. ಅಂತೆಯೇ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಧಾರ್ಮಿಕ ಪರಂಪರೆ, ಮತ್ತು ಆಧುನಿಕ ಜಗತ್ತಿಗೆ ಸಮನ್ವತೆಯ ಸೇತುವೆಯಾಗಿ ಮಠದ ಸೇವ ಕಾರ್ಯವನ್ನು ಆಧುನಿಕ ಜಗತ್ತಿಗೆ ವಿಸ್ತರಿಸಿ, ಪ್ರಸಾದ ನಿಲಯಗಳನ್ನು ತೆರೆದು ಕಷ್ಟದ ದಿನಗಳಲ್ಲೂ ಸಹ ಪ್ರಸಾದ ನಿಲಯಗಳನ್ನು ಮುನ್ನಡೆಸಿ ಅನ್ನದಾಸೋಹ, ಅಕ್ಷರ ದಾಸೋಹ, ಆರೋಗ್ಯ ದಾಸೋಹ ಕ್ಷೇತ್ರಗಳಲ್ಲಿ ಮಠದ ಸೇವ ಕಾರ್ಯವನ್ನು ಜಗತ್ ವಿಖ್ಯಾತಿಗೊಳಿಸಿದ್ದಾರೆ ಅಂತಹ ಪರಮಪೂಜ್ಯ ಶ್ರೀಗಳ ಸಂಸ್ಮರಣೀಯ ಕಾರ್ಯವನ್ನು ನಂಜನಗೂಡಿನ ನಾಗರಿಕರು ನಡೆಸುತ್ತಿರುವುದು ಶ್ಲಾಘನೀಯ ಎಂದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು 12ನೇ ಶತಮಾನದ ಬಸವಣ್ಣನವರ ಮೂಲ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅನ್ನ, ಅಕ್ಷರ, ಆರೋಗ್ಯ ದಾಸೋಹದ ಮೂಲಕ ಜನರಿಗೆ ನಿಸ್ವಾರ್ಥ ಸೇವೆಯನ್ನು ಒದಗಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರಂತೆಯೇ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸುತ್ತೂರು ಮಠದ ಸೇವಾ ಕಾರ್ಯವನ್ನು ರಾಜ್ಯ ಮತ್ತು ವಿದೇಶಗಳಲ್ಲಿ ವಿಸ್ತರಿಸಿ ಸೇವೆ ಸಲ್ಲಿಸುತ್ತಾ ಬಸವಣ್ಣನವರ ಮೂಲ ತತ್ವ ಸಿದ್ಧಾಂತಗಳನ್ನು ಜೀವಂತವಾಗಿ ಮುನ್ನಡೆಸುತ್ತಿದ್ದಾರೆ ಎಂದರು. ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ದೈವಿಕ ಶಕ್ತಿಯ ಪ್ರೇರಣೆಯಿಂದಾಗಿ 12ನೇ ವಯಸ್ಸಿನಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಕಡು ಬಡವರಿಗೆ ಜನಸಾಮಾನ್ಯರಿಗೆ ಸೇವೆ ಮಾಡುವ ಮನೋಭಾವನೆ ಬೆಳೆದಿದ್ದು, ಅವರಲ್ಲಿದ್ದ ಮಾತೃ ಹೃದಯದ ಕಾರಣದಿಂದಾಗಿ ಅನ್ನ, ಅಕ್ಷರ ಮತ್ತು ಆರೋಗ್ಯ ದಾಸೋಹದ ಮೂಲಕ ಇಡೀ ರಾಜ್ಯದಲ್ಲಿ ಕ್ರಾಂತಿ ಮಾಡಿದ್ದಾರೆ. ಜೊತೆಗೆ ಸಮಾಜದಲ್ಲಿರುವ ಅಸ್ಪೃಶ್ಯತೆಯ ಭಾವನೆಯನ್ನು ದೂರ ಮಾಡಲು ಅಸ್ಪೃಶ್ಯರ ಜೊತೆಗೆ ಸಹಪಂಕ್ತಿ ಭೋಜನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿ ಮೇಲು ಕೀಳು ಭಾವನೆಯನ್ನು ದೂರ ಮಾಡಲು ಶ್ರಮಿಸಿದವರು ಎಂದರು.ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಾಧಕ ರೈತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಶ್ರೀಕಂಠೇಶ್ವರ ದೇವಾಲಯದ ಆವರಣದಿಂದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯು ಆರ್.ಪಿ. ರಸ್ತೆಯ ಮೂಲಕ ಸಾಗಿ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಅಂತ್ಯಗೊಂಡಿತು. ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ ನುಡಿ ನಮನ ಸಲ್ಲಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಜಿಪಂ ಮಾಜಿ ಸದಸ್ಯ ಮಂಗಳಾ ಸೋಮಶೇಖರ್, ಮುಖಂಡರಾದ ಯು.ಎನ್. ಪದ್ಮನಾಭರಾವ್, ಕೃಷ್ಣಪ್ಪ, ಬಿ.ಎಸ್. ಮಹದೇವಪ್ಪ, ಎಂ. ಮಾದಪ್ಪ, ಕುಳ್ಳಯ್ಯ, ಎಚ್.ಬಿ. ರೇವಣ್ಣ, ಮಹೇಶ್, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಹೊನ್ನೇಗೌಡ, ಪ್ರಾಧ್ಯಾಪಕರಾದ ಪ್ರಭುಸ್ವಾಮಿ ಇದ್ದರು.------------------
ಸೇವಾ ಕಾರ್ಯ ವಿಸ್ತರಿಸಿದ ಕೀರ್ತಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ
ಭಾರತ ದೇಶವು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಪರಂಪರೆಯ ಇತಿಹಾಸವನ್ನು ಗರ್ಭಂತರಿಸಿಕೊಂಡಿರುವ ಕಾರಣಕ್ಕೆ ಜಗತ್ತಿನ ಮುಂದುವರಿದ ದೇಶಗಳು ಕೂಡ ಭಾರತ ದೇಶದತ್ತ ತಿರುಗಿ ನೋಡುವಂತಾಗಿದೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.