ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಎಐ ಮತ್ತು ಸುಧಾರಿತ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ರೋಗಿಯನ್ನು ಗುಣಪಡಿಸುವಲ್ಲಿ ಫಿಸಿಯೋಥೆರಪಿಸ್ಟ್ ಗಳ ಹಸ್ತಸ್ಪರ್ಶ ಮತ್ತು ಮಾನವೀಯ ನುಡಿಗಳಿಗೆ ಪರ್ಯಾಯವಿಲ್ಲ ಎಂದು ಅಲೈಡ್ ಮತ್ತು ಹೆಲ್ತ್ ಕೇರ್ ಪ್ರೊಫೆಷನ್ಸ್ ರಾಷ್ಟ್ರೀಯ ಆಯೋಗದ ಸದಸ್ಯ ಪ್ರೊ. ರಾಜೇಶ್ ಶೆಣೈ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜು ಪದವಿ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸಕರು ನೀಡುವ ಚಿಕಿತ್ಸೆ ತಕ್ಷಣದ ಫಲಿತಾಂಶ ನೀಡಬಹುದು. ಆದರೆ, ಫಿಸಿಯೋಥೆರಪಿಸ್ಟ್ ಗಳ ಶ್ರಮ ನಿಧಾನ ಹಾಗೂ ಶ್ರಮದಾಯಕವಾದದ್ದು. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಮತ್ತೆ ತನ್ನದೇ ಕಾಲಿನ ಮೇಲೆ ನಿಲ್ಲುವ ಆತ್ಮವಿಶ್ವಾಸ ತುಂಬುವುದು ನಿಮ್ಮ ಕೈಗಳು ಎಂದು ಹೇಳಿದರು.
ರೋಗ ನಿರ್ಣಯಕ್ಕಿಂತ ಮೊದಲು ಮನುಷ್ಯತ್ವಕ್ಕೆ ಆದ್ಯತೆ ನೀಡಿ. ಪ್ರತಿಯೊಬ್ಬ ರೋಗಿಯೂ ಕೇವಲ ಕಾಯಿಲೆಯಲ್ಲ, ಅವರ ಹಿಂದೆ ಒಂದು ಕುಟುಂಬ ಮತ್ತು ಆಸೆಗಳಿರುತ್ತವೆ. ಅವರನ್ನು ಪ್ರೀತಿ ಮತ್ತು ಕರುಣೆಯಿಂದ ಉಪಚರಿಸಿ. ಜೀವನಪರ್ಯಂತ ಕಲಿಯುವ ವಿದ್ಯಾರ್ಥಿಯಾಗಿರಿ. ವೈದ್ಯಕೀಯ ಕ್ಷೇತ್ರ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಹೊಸ ಸಂಶೋಧನೆಗಳು ಮತ್ತು ಚಿಕಿತ್ಸಾ ಪದ್ಧತಿಗಳನ್ನು ಸದಾ ಕಲಿಯುತ್ತಾ ನಿಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.ಮೌಲ್ಯಮಾಪನವಿಲ್ಲದ ಕ್ಷಣಗಳೇ ನಿಮ್ಮ ವ್ಯಕ್ತಿತ್ವ. ನಿಮ್ಮ ಶ್ರಮಕ್ಕೆ ಯಾರೂ ಮೆಚ್ಚುಗೆ ಸೂಚಿಸದಿದ್ದರೂ, ರೋಗಿಯೊಂದಿಗೆ ಸಹನೆಯಿಂದ ನಡೆದುಕೊಳ್ಳುವ ಸಣ್ಣ ಸಣ್ಣ ಕ್ಷಣಗಳೇ ನಿಮ್ಮನ್ನು ನಿಜವಾದ ಗುಣಮುಖರನ್ನಾಗಿಸುವ ವೈದ್ಯರನ್ನಾಗಿ ಮಾಡುತ್ತವೆ. ಈ ಮೂರು ಸೂತ್ರಗಳನ್ನು ವೈದ್ಯರು ಅನುಸರಿಸಿ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಕಾಲೇಜಿನ ಪ್ರಾಂಶುಪಾಲೆ ಡಾ. ಕವಿತಾ ರಾಜ ಮೊದಲಾದವರು ಇದ್ದರು.