ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ದಸರ ಮಹೋತ್ಸವದ ಸಿದ್ಧತೆಯಲ್ಲಿರುವ ಮೈಸೂರಿಗರ ಮತ್ತು ಪ್ರವಾಸಿಗರ ಗಮನ ಸೆಳೆಯಲು ನಗರದ ಜೆಎಸ್‌ಎಸ್‌ಅರ್ಬನ್ ಹಾತ್ ರಾಷ್ಟ್ರೀಯ ಮಟ್ಟದ ಗಾಂಧಿ ಶಿಲ್ಪ ಬಜಾರ್ ಮೇಳ ಆರಂಭಿಸಿದೆ.ಸುಮಾರು 150 ಮಳಿಗೆಗಳಲ್ಲಿ ಆಕರ್ಷಕ ಕರಕುಶಲ ವಸ್ತುಗಳು ಅನಾವರಣಗೊಂಡಿವೆ. ಈ ಬಾರಿಯ ಕರಕುಶಲ ಮೇಳದಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕರಕುಶಲಕರ್ಮಿಗಳು ತಯಾರಿಸಿದ ಹಲವು ವಸ್ತುಗಳು ಗಮನ ಸೆಳೆಯುತ್ತಿವೆ. ರಾಜ್ಯದ ಅಸ್ಮಿತೆಯಾದ ಚನ್ನಪಟ್ಟಣದ ಗೊಂಬೆಗಳ ವೈವಿಧ್ಯಮಯ ಆಗರ, ಪಶ್ಚಿಮ ಬಂಗಾಳದ ಕುಶಲಕರ್ಮಿಗಳ ಕೌಶಲದಿಂದ ಹೊರ ಹೊಮ್ಮಿರುವ ಮಣ್ಣಿನಿಂದ ತಯಾರಿಸಿದ ಆಭರಣ, ಚರ್ಮದ ಕಲಾಕೃತಿಗಳು, ರಾಜಸ್ಥಾನದ ಮೆಟಲ್ ಕ್ರಾಫ್ಟ್, ಒಡಿಶಾದ ಪಟ್ಟ ಚಿತ್ರ, ಕೇರಳ ರಾಜ್ಯದ ಚಿಪ್ಪಿನ ಕಲಾ ಕೃತಿಗಳು, ಕೈಮಗ್ಗ ಉತ್ಪನ್ನಗಳಂತೂ ಕಸದಿಂದ ರಸ ಎಂಬುದನ್ನೂ ಕಲ್ಪವೃಕ್ಷದಲ್ಲಿ ಯಾವುದೂ ವ್ಯರ್ಥವಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ.
ಅರ್ಬನ್ ಹಾತ್ ನ 150 ಮಳಿಗೆಗಳಲ್ಲಿ ಹೊಸ ಆಕರ್ಷಣೆಗಳೊಂದಿಗೆ ಮೆರುಗು ಪಡೆದಿರುವ ರಾಷ್ಟ್ರೀಯ ಮಟ್ಟದ ಗಾಂಧಿ ಶಿಲ್ಪ ಬಜಾರ್ ಮೇಳದಲ್ಲಿ ಓಡಾಡಿದರೆ ಇವೆಲ್ಲವನ್ನೂ ಕಂಡು ಖರೀದಿಸಬಹುದು. ಈ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಮೇಳವು ಸೆ. 21ರ ಭಾನುವಾರದವರೆಗೆ ನಡೆಯಲಿದೆ.ತಯಾರಕರಿಂದ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಕರಕುಶಲ ಇಲಾಖೆ ಮತ್ತು ಜೆಎಸ್‌ಎಸ್ ಅರ್ಬನ್ ಹಾತ್ ಮಾಡುತ್ತಿದೆ.
ಜೆಎಸ್‌ಎಸ್ ಮಹಾವಿದ್ಯಾಾಪೀಠದ ಜೆಎಸ್‌ಎಸ್ ಆಸ್ಪತ್ರೆ ಇವರು ಮೇಳದ 10 ದಿನವೂ ಕರಕುಶಲಕರ್ಮಿಗಳಿಗೆ ಮತ್ತು ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ಉಚಿತವಾಗಿ ವೈದ್ಯಕೀಯ ತಪಾಸಣಾ ವ್ಯವಸ್ಥೆ ಮಾಡಿದ್ದಾರೆ. ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.ನಗರ ಬಸ್ ನಿಲ್ದಾಣದಿಂದ ಪ್ರತಿದಿನ ರೂಟ್ ನಂಬರ್ 117/1 ರ ಬಸ್ ಗಳು ಅರ್ಬನ್ ಹಾತ್ ಗೆ ಸಂಚರಿಸುತ್ತಿದ್ದು, ಕಲಾಸಕ್ತರನ್ನು ಕರೆದೊಯ್ಯುತ್ತಿವೆ.