ಸಿಪಿಕೆ ಸಮಗ್ರ ಸಾಹಿತ್ಯ ಹೊರತರಬೇಕು

| Published : Apr 14 2025, 01:30 AM IST

ಸಾರಾಂಶ

ಅನೇಕ ಚಿತ್ರಗಳನ್ನು ಸೇರಿಸಿ ಒಂದು ಚಿತ್ರವನ್ನು ಮಾಡಿದರೆ ಅದನ್ನು ಕೊಲ್ಯಾಜ್ ಮಾದರಿಯ ಚಿತ್ರ ಎನ್ನುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಸಿಪಿಕೆ ಅವರು ರಚಿಸಿರುವ ಎಲ್ಲಾ ಕೃತಿಗಳನ್ನು ಒಗ್ಗೂಡಿಸಿ ಸಿಪಿಕೆ ಅವರ ಸಮಗ್ರ ಸಾಹಿತ್ಯವನ್ನು ಹೊರತರಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ ಹೇಳಿದರು.

ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಆವರಣದ ಮಂತ್ರ ಮಹರ್ಷಿ ಸಭಾ ಭವನದಲ್ಲಿ ಶಿವರಾತ್ರೀಶ್ವರ ಮಹಿಳಾ ಸಮಾಜ ಹಾಗೂ ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ನಡೆದ ಡಾ.ಸಿ.ಪಿ.ಕೆ ಅವರ 86ನೇ ಜನ್ಮೋತ್ಸವ ಸಂಭ್ರಮ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ- ಕಸ್ತೂರಿ ಬಾ ಗಾಂಧಿ ಪ್ರಶಸ್ತಿ ಪ್ರದಾನ ಹಾಗೂ ಬೊಗಸೆಯೊಳಗಿನ ಚುಟುಕು ಸಾಗರ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಚಿತ್ರಗಳನ್ನು ಸೇರಿಸಿ ಒಂದು ಚಿತ್ರವನ್ನು ಮಾಡಿದರೆ ಅದನ್ನು ಕೊಲ್ಯಾಜ್ ಮಾದರಿಯ ಚಿತ್ರ ಎನ್ನುತ್ತಾರೆ. ಅದೇ ರೀತಿ ಸಾಹಿತ್ಯದಲ್ಲೂ ಕೊಲ್ಯಾಜ್ ಮಾದರಿಯ ಸಾಹಿತ್ಯವಿದೆ. ಅದರಲ್ಲಿ ಸಣ್ಣಕಥೆ, ಸಣ್ಣ ಪ್ರಬಂಧಗಳು, ಚುಟುಕು ಸಾಹಿತ್ಯ ಬರಬಹುದು ಅಥವಾ ಸಾಹಿತ್ಯದ ಅನೇಕ ವಿಭಾಗಗಳಿಂದ ಚುಟುಕುಗಳನ್ನು ಆರಿಸಿಕೊಂಡರೆ ಕೊಲ್ಯಾಜ್ ಸಾಹಿತ್ಯ ಎನ್ನುವರು ಎಂದರು.

ಸಿಪಿಕೆ ಅವರು ರಚಿಸಿರುವ ಪ್ರತಿಯೊಂದು ಕೃತಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರು ಮಾತಾಡಿದರೆ ಸಾಹಿತ್ಯದ ವೈಭವ ಕಾಣಿಸಿಕೊಳ್ಳುತ್ತದೆ ಎಂದರು.

ಮಹಿಳೆಯರ ದಿನಾಚರಣೆ ದಿನವೂ ಸಮಾನತೆಯನ್ನು ಸಾರುವ ದಿನ. ಪುರುಷರಿಗೂ ಸಮಾನವಾದ ಸಾಧನೆಯನ್ನು ಸ್ತ್ರೀಯರು ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ 60 ವರ್ಷದ ಮಹಿಳೆಯೊಬ್ಬರು ದಕ್ಷಿಣ ಆಫ್ರಿಕಾಗೆ ಹೋಗಿ ಅಲ್ಲಿ ಸೋಲಾರ್ ಎನರ್ಜಿಯ ಬಗ್ಗೆ ತಿಳಿದುಕೊಂಡ ಅವರು ರಾಜಸ್ಥಾನಕ್ಕೆ ಬಂದು ತಮ್ಮ ಹಳ್ಳಿಯಲ್ಲಿ ತಾವು ಕಲಿತ ಸೋಲಾರ್ ಎನರ್ಜಿ ಬಳಸಿಕೊಂಡು ಮನೆಗಳಿಗೆ ವಿದ್ಯುತ್ ನೀಡಿದರು. ಇದನ್ನು ಗಮನಿಸಿದ ರಾಜಸ್ಥಾನದ ಸರ್ಕಾರ ಆ ಮಹಿಳಗೆ ಸೋಲಾರ್ ವುಮೆನ್ ಎಂದು ಬಿರುದು ನೀಡಿ ಗೌರವಿಸಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಾಹಿತ್ಯ ಲೋಕದ ಮಾಂತ್ರಿಕ ಸಿಪಿಕೆ. ಹಳೆಗನ್ನಡ ಸಾಹಿತ್ಯಕ್ಕೆ ಹೊಸ ವಾಖ್ಯಾನ ನೀಡಿದ್ದಾರೆ ಎಂದು ಸ್ವತಃ ದೇಜೇಗೌ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಕೆ. ಲೋಲಾಕ್ಷಿ, ಸಾಹಿತಿ ಡಾ. ತಾರಿಣಿ ಚಿದಾನಂದಗೌಡ, ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ಅಧ್ಯಕ್ಷ ರತ್ನಾ ಹಾಲಪ್ಪಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್ ಇದ್ದರು.