ಸಾರಾಂಶ
ಕನ್ನಡಭವನದ ನಯನ ಸಭಾಂಗಣದಲ್ಲಿ ‘ರಂಗೋತ್ರಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮಿಗಳ ಕುರಿತ ‘ಯೋಗಸ್ಥಃ’ ಕೃತಿ ಲೋಕಾರ್ಪಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನ್ಯಾಯಾಂಗದ ಆಧಾರವಾಗಿರುವ ನ್ಯಾಯಾಧೀಶರಿಗೆ ಅದ್ಭುತ ಜ್ಞಾನಶಕ್ತಿ ಇದ್ದರೆ ಸಾಲದು, ಅದನ್ನು ಬಳಸಿ ಜನರಿಗೆ ನ್ಯಾಯ ಸಿಗುವಂತ ತೀರ್ಪು ನೀಡುವ ಕಾರ್ಯಶಕ್ತಿಯೂ ಇರಬೇಕೆಂದು ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಹೇಳಿದರು.ಸೋಮವಾರ ಕನ್ನಡಭವನದ ನಯನ ಸಭಾಂಗಣದಲ್ಲಿ ‘ರಂಗೋತ್ರಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮಿಗಳ ಕುರಿತ ‘ಯೋಗಸ್ಥಃ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಯುರೋಪಿನ ಕೆಲವು ದೇಶದ ನ್ಯಾಯಾಲಯಗಳಲ್ಲಿ ಒಂದು ಪ್ರಕರಣವನ್ನು ಬಹಳ ದಿನಗಳವರೆಗೆ ತನಿಖೆ ಮಾಡಿ ತೀರ್ಪು ನೀಡುತ್ತಾರೆ. ಆದರೆ ಭಾರತದಲ್ಲಿಯೂ ಇದೇ ರೀತಿ ಮಾಡಿದರೆ, ಪ್ರಕರಣಗಳು ಮುಗಿಯುವುದಿಲ್ಲ, ಜನರಿಗೆ ನ್ಯಾಯವೂ ಸಿಗಲ್ಲ ಎಂದರು.
ಸಿದ್ದೇಶ್ವರ ಸ್ವಾಮೀಜಿ ಅವರ ಕಾರ್ಯಶೈಲಿ, ಮಾರ್ಗದರ್ಶನದಂತೆ ನಡೆದರೆ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅವರು ಕಾರ್ಯದ ಜತೆಗೆ ಪ್ರಾಮಾಣಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಕಲಿಸಿಕೊಟ್ಟರು ಅವರಂತಹ ಕಾರ್ಯಶಕ್ತಿ ರೂಢಿಸಿಕೊಂಡರೆ ಬದುಕು ಸಾರ್ಥಕ ಎಂದು ಹೇಳಿದರು..ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅವರದ್ದು ತೆರೆದಿಟ್ಟ ಜೀವನ. ಇತರರಿಗೆ ಬದುಕಿನ ದಾರಿದೀಪದ ಜತೆಗೆ, ಅಮೂಲ್ಯವಾದ ಪುಸ್ತಕವೂ ಹೌದು. ಅವರ ಮಾತುಗಳು, ಮೃದು ಪ್ರವಚನಗಳು ಮನಸ್ಸು ಪರಿವರ್ತಿಸುವ ಶಕ್ತಿ ಹೊಂದಿದ್ದವು ಎಂದರು.
ಆಧ್ಯಾತ್ಮಿಕ ಚಿಂತಕ ಜಂಬುನಾಥ ಮಳಿಮಠ, ಸಂಸದ ಜಿ.ಸಿ. ಚಂದ್ರಶೇಖರ್, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೇಂದ್ರ ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಸಂಸ್ಕೃತಿ ಚಿಂತಕ ಡಾ. ರಾಜಶೇಖರ್ ಮಠಪತಿ, ರಂಗೋತ್ರಿ ಸಂಸ್ಥಾಪಕ ಕೆ.ಎಚ್. ಕುಮಾರ್ ಉಪಸ್ಥಿತಿದ್ದರು.ಫೋಟೋ:
ನಗರದಲ್ಲಿ ರಂಗೋತ್ರಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು ಸಿದ್ದೇಶ್ವರ ಸ್ವಾಮಿಗಳ ಕುರಿತ ‘ಯೋಗಸ್ಥಃ’ ಕೃತಿ ಲೋಕಾರ್ಪಣೆಗೊಳಿಸಿದರು. ವಿ.ಆರ್.ಸುದರ್ಶನ್, ಜಂಬುನಾಥ ಮಳಿಮಠ, ಜಿ.ಸಿ.ಚಂದ್ರಶೇಖರ್ ಇದ್ದರು.