ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇತ್ತೀಚೆಗೆ ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್- ಜೆಎಂಎಫ್‌ಸಿ ನ್ಯಾಯಾಲಯ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.ನಕ್ಸಲ್ ಚಳುವಳಿಗೆ ಸೇರಿ ಅಲ್ಲಿನ ಸಂಗಾತಿ ನಕ್ಸಲ್ ಸಲೀಂ ಎಂಬಾತನನ್ನು ಮದುವೆಯಾಗಿ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ, ಇಲ್ಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ, ಫೆ.2ರಂದು ಉಡುಪಿಯಲ್ಲಿ ಶರಣಾಗಿದ್ದಳು. ನಂತರ ಆಕೆಗೆ ಜಿಲ್ಲಾ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.ನಂತರ, ಆಕೆಯ ಮೇಲೆ ಅಮಾಸೆಬೈಲಿನಲ್ಲಿ ಕೂಂಬಿಂಗ್ ನಿರತ ಪೊಲೀಸರ ಮೇಲೆ ಗುಂಡಿನ ದಾಳಿ, ಮನೆಗೆ ನುಗ್ಗಿ ಕೊಲೆ ಬೆದರಿಕೆ ಮತ್ತು ಸಾರ್ವಜನಿಕ ಜಾಗದಲ್ಲಿ ಕರಪತ್ರ ಮತ್ತು ಬ್ಯಾನರ್ ಅಂಟಿಸಿದ ಪ್ರಕರಣಗಳಿದ್ದು, ಈ ಬಗ್ಗೆ ವಿಚಾರಣೆಗೆ ಪೊಲೀಸರ ಮನವಿಯಂತೆ ನ್ಯಾಯಾಲಯ ಆಕೆಯನ್ನು 6 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು. ನಂತರ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಆಕೆಯನ್ನು ವಿಚಾರಣೆ ನಡೆಸಲಾಯಿತು. ಆಕೆಯ ಮೇಲಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಕೆಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಕೂಡ ಮಾಡಲಾಗಿದೆ.ಇದೀಗ ಪೊಲೀಸ್ ವಶ ಅವಧಿ ಮುಗಿದು, ನ್ಯಾಯಾಲಯ ಮತ್ತೆ ಮುಂದಿನ 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದೆ.