ಹುಬ್ಬಳ್ಳಿ:
ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಜುಲೈ ಅಂತ್ಯದ ವರೆಗೆ ಗಡುವು ನೀಡಲಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಸಿದ್ದಾರೆ.ಬುಧವಾರ ಇಲ್ಲಿನ ಹೊಸೂರು ವೃತ್ತದ ಗಾಳಿ ದುರ್ಗಮ್ಮ ದೇವಸ್ಥಾನದಿಂದ ಚೆನ್ನಮ್ಮ ವೃತ್ತದ ವರೆಗೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ಕಾಲ್ನಡಿಗೆಯ ಮೂಲಕ ವೀಕ್ಷಿಸ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ನೀಡಿದ್ದ ಗಡುವಿನ ಪ್ರಕಾರ ಏಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕೆಲ ತಾಂತ್ರಿಕ ತೊಂದರೆಯಿಂದ ಸಾಕಷ್ಟು ಕಾಮಗಾರಿಗಳು ಹಾಗೇ ಉಳಿದುಕೊಂಡಿವೆ. ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಾಮಗಾರಿ ಮಾಡುವುದು ಕಷ್ಟ. ಕೇವಲ ಫ್ಲೈ ಓವರ್ ಕಾಮಗಾರಿಯನ್ನು ಮಾತ್ರ ನೋಡದೇ, ಅದಕ್ಕೆ ಸಂಬಂಧಿಸಿದಂತೆ ಕುಡಿಯುವ ಪೈಪ್‌ಲೈನ್ ಅಳವಡಿಕೆ, ರಸ್ತೆ ನಿರ್ಮಾಣ, ವಿದ್ಯುತ್ ಲೈನ್ ಅಳವಡಿಕೆ, ಕೇಬಲ್ಸ್ ಹಾಗೂ ಯುಜಿಡಿ ಲೈನ್ ಅಳವಡಿಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿವೆ. ಮುಂದಿನ 6 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕುರಿತು ಒಂದು ವಾರದೊಳಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚಿಸುವುದಾಗಿ ತಿಳಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾಮಗಾರಿ ಪೂರ್ತಿಗೊಳಿಸಲು ಈ ಹಿಂದೆ ಏಪ್ರಿಲ್ ಅಂತ್ಯದ ವರೆಗೆ ಗಡುವು ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದಿದ್ದರೂ, ವೇಗ ಪಡೆದುಕೊಂಡಿದೆ. ಗದಗ ರಸ್ತೆಯಲ್ಲಿನ ಆಸ್ತಿಗಳ ಭೂಸ್ವಾಧೀನ, ಉಪನಗರ ಪೋಲಿಸ್ ಠಾಣೆ ಸ್ಥಳಾಂತದರ ಕಾರಣ ಕಾಮಗಾರಿಯ ವೇಗ ಕುಗ್ಗಿದ್ದು ನಿಜ. ಆದರೆ, ಎಲ್ಲವೂ ತಿಳಿಗೊಂಡಿದೆ. ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆದಾರರ ಮೇಲೆ ನಾವು ಒತ್ತಡ ಹೇರದಿದ್ದರೆ ಹುಬ್ಬಳ್ಳಿಯ ಪರಿಸ್ಥಿತಿ ಅದ್ವಾನವಾಗುತ್ತಿತ್ತು. ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಹೆಚ್ಚಿನ ಒತ್ತಡ ಹೇರಿ ಮುತುವರ್ಜಿಯಿಂದ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಚೆನ್ನಮ್ಮ ವೃತ್ತ ಮತ್ತು ಹೊಸೂರು ವೃತ್ತದಲ್ಲಿ 19ಕ್ಕೂ ಹೆಚ್ಚು ಗರ್ಡರ್ಸ್ ಅಳವಡಿಸಬೇಕಿರುವುದರಿಂದ 2 ತಿಂಗಳು ಹೊಸೂರು ವೃತ್ತದ ಸಂಚಾರವನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರು ಕೇಳಿಕೊಂಡಿದ್ದಾರೆ. ಆದರೆ, ಬೈಕ್ ಮತ್ತು ಕಾರ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಭಾರೀ ಗಾತ್ರದ ವಾಹನಗಳಿಗೆ ಪರ‍್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಒಂದು ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಎಡಿಸಿ ಸಿ.ಡಿ. ಗೀತಾ, ತಹಸೀಲ್ದಾರ್ ಮಹೇಶ ಗಸ್ತೆ, ಪಿಡಬ್ಲ್ಯೂಡಿ ಇಇ ಸತೀಶ ನಾಗನೂರ, ಹು-ಧಾ ಮಹಾನಗರ ಪಾಲಿಕೆ ಉಪಆಯುಕ್ತ ವಿಜಯಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.