ಇನ್ನೇನು ಬೆಳೆಗಳು ಒಣಗಿ ಹೋದವು ಎನ್ನುವಷ್ಟರಲ್ಲಿ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಮಳೆ ರೈತರಲ್ಲಿ ಕೃಷಿ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದೆ.

ಧಾರವಾಡ: ವಾಡಿಕೆಗಿಂತ ಕಡಿಮೆ ಮಳೆಯಿಂದಾಗಿ ತೀವ್ರ ಆತಂಕದಲ್ಲಿದ ಜಿಲ್ಲೆಯ ರೈತರಿಗೆ ಜುಲೈ ತಿಂಗಳಿಂದ ಶುರುವಾಗಿರುವ ನಿರಂತರ ಮಳೆಯು ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ. ಇನ್ನೇನು ಬೆಳೆಗಳು ಒಣಗಿ ಹೋದವು ಎನ್ನುವಷ್ಟರಲ್ಲಿ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಮಳೆ ರೈತರಲ್ಲಿ ಕೃಷಿ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದೆ.

ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬೆಳೆಗಳು ಮತ್ತೆ ಚಿಗುರಿ ನಿಂತಿವೆ. ಹೀಗಾಗಿ ರೈತ ಸಮುದಾಯದ ಆತ್ಮಸ್ಥೈರ್ಯ ಚಿಗುರಿದೆ. ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದು, ಹುಟ್ಟಿದ್ದ ಬೆಳೆಗಳ ಬೆಳವಣಿಗೆಯಾಗಲು ತೇವಾಂಶದ ಅಗತ್ಯವಿತ್ತು. ಆದರೆ, ಇಡೀ ಜೂನ್‌ ತಿಂಗಳು ಮಳೆಯಾಗದೇ ರೈತರು ತೀವ್ರ ಕಂಗಾಲಾಗಿದ್ದರು.

ಎಷ್ಟೆಷ್ಟು ಮಳೆಯಾಗಿತ್ತು?

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್‌ ತಿಂಗಳಲ್ಲಿ 124.8 ಮಿ.ಮೀ.ನಷ್ಟು ವಾಡಿಕೆ ಮಳೆಯಲ್ಲಿ ಶೇ. 23ರಷ್ಟು ಕೊರತೆ ದಾಖಲಾಗಿತ್ತು. ಮಳೆಯ ಹಂಚಿಕೆಯು ಅಸಮರ್ಪಕವಾಗಿತ್ತು. ಧಾರವಾಡ ತಾಲೂಕಿನಲ್ಲಿ 110.7 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 87.2 ಮಿ.ಮೀ. ಮಳೆಯಾಗಿದ್ದು, ಶೇ. 21ರಷ್ಟು ಕೊರತೆ ದಾಖಲಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 121 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 89 ಮಿ.ಮೀ. ಮಳೆಯಾಗಿದ್ದು, ಶೇ. 26ರಷ್ಟು ಕೊರತೆ ಉಂಟಾಗಿದೆ. ಕಲಘಟಗಿಯಲ್ಲಿ 160.6 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 115.6 ಮಿ.ಮೀ. ಮಳೆಯಾಗಿದ್ದು, ಶೇ. 28ರಷ್ಟು ಕೊರತೆ ಕಂಡುಬಂದಿದೆ.

ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯನ್ನು ದಾಖಲಿಸಿದ ಏಕೈಕ ತಾಲೂಕು ಕುಂದಗೋಳ. ಇಲ್ಲಿ 93.1 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 130.5 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ. 40ರಷ್ಟು ಹೆಚ್ಚಾಗಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಉತ್ತಮ ಮಳೆಯನ್ನು ಕಂಡಿದ್ದ ನವಲಗುಂದ ತಾಲೂಕು, ಜೂನ್‌ನಲ್ಲಿನ ಪ್ರಮುಖ ಬಿತ್ತನೆ ಹಂಗಾಮಿನಲ್ಲಿ ಮಳೆಯ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ಕಂಡಿತು. ಇಲ್ಲಿ 91.1 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 75.8 ಮಿ.ಮೀ. ಮಳೆಯಾಗಿದ್ದು, ಶೇ. 17ರಷ್ಟು ಕೊರತೆ ದಾಖಲಾಗಿದೆ. ಹೊಸದಾಗಿ ರಚನೆಯಾದ ಅಳ್ನಾವರ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿಯೂ ಮಳೆಯ ಕೊರತೆ ಕಂಡುಬಂದಿದ್ದು, ಕ್ರಮವಾಗಿ ಶೇ. 42 ಮತ್ತು ಶೇ. 25ರಷ್ಟು ಕೊರತೆ ದಾಖಲಾಗಿದೆ.

ಏರಿದ ಮಳೆ ಪ್ರಮಾಣಪ್ರಸ್ತುತ ಜಿಲ್ಲೆಯಲ್ಲಿ ಜು. 1ರಂದು 1.2 ಮಿ.ಮೀ., ಜು. 2ರಂದು 1.9 ಮಿ.ಮೀ. ಜು. 3ರಂದು 2.6 ಮಿ.ಮೀ., ಜು. 4ರಂದು 2.7 ಹಾಗೂ ಜು. 5ರಂದು ಅತಿ ಹೆಚ್ಚು 7.9ರಷ್ಟು ಮಳೆಯಾಗಿದೆ. ಇದು ಮುಂಗಾರು ಕೃಷಿ ಚಟುವಟಿಕೆಗೆ ಮತ್ತಷ್ಟು ಬಲ ನೀಡಿದೆ. ನವಲಗುಂದ ತಾಲೂಕಿನ ಕೆಲವು ಕಡೆಗಳಲ್ಲಿ ತೀರಾ ಕಡಿಮೆ ಸಂಖ್ಯೆ ರೈತರ ಬೆಳೆಗಳು ಒಣಗಿದ್ದು, ಉಳಿದಂತೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಜೋರು ಪಡೆದಿವೆ. ಕಳೆ ಕೀಳುವುದು, ಎಡೆಕುಂಟಿ ಹೊಡೆಯುವುದು ಸೇರಿದಂತೆ ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರು ಚುರುಕಾಗಿ ಕಾರ್ಯ ಮಾಡುತ್ತಿದ್ದಾರೆ.ಮಳೆಯ ಗಾಳಿಯಿಂದ ಧರೆಗುರುಳಿದ ಮರಗಳು

ಧಾರವಾಡ: ಕಳೆದ ಎರಡ್ಮೂರು ದಿನಗಳಿಂದ ಧಾರವಾಡ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಭಾನುವಾರ ಮಳೆಯೊಂದಿಗೆ ಬಂದ ಬಿರುಸಾದ ಗಾಳಿಯಿಂದ ಕೆಲವೆಡೆ ಮರಗಳು ಧರೆಗುರುಳಿ ಅಸ್ತವ್ಯಸ್ತವಾಗಿದೆ.ಸೈದಾಪುರ, ಗುಲಗಂಜಿಕೊಪ್ಪ, ಮೆಹಬೂಬ್ ನಗರ, ಕೊಪ್ಪದಕೇರಿ, ನಾರಾಯಣಪುರ, ಸಾಧನಕೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಗಿಡಗಳು ಹಾಗೂ ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದ ಪರಿಣಾಮ ಭಾನುವಾರ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಇನ್ನು, ಸ್ಥಳಕ್ಕೆ ದೌಡಾಯಿಸಿದ ಹೆಸ್ಕಾಂ ಸಿಬ್ಬಂದಿ, ವಿದ್ಯುತ್ ಕಂಬದ ಮೇಲೆ ಬಿದ್ದ ಮರಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ಕಾರ್ಯ ಕೈಗೊಂಡರೂ ಸಂಜೆ 6ರ ನಂತರವೂ ವಿದ್ಯುತ್‌ ವ್ಯತ್ಯಯ ಮಾತ್ರ ಮುಂದುವರಿದಿತ್ತು.

ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ಸರ್ಕಾರಕ್ಕೆ ಕೋನರಡ್ಡಿ ಪತ್ರ

ಧಾರವಾಡ: ಮಳೆ ಕೊರತೆ ಎದುರಿಸುತ್ತಿರುವ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಜಿಲ್ಲೆಯ ಮೇಲುಸ್ತುವಾರಿ ಆಗಿರುವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಪ್ರತಿಶತ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮೋಡಗಳಿದ್ದರೂ ಮಳೆ ಸುರಿಯದೇ ರೈತರು ನಿರಾಶರಾಗುತ್ತಿದ್ದಾರೆ. ಮಳೆಯ ಕೊರತೆ ಬರೀ ಕೃಷಿಗೆ ಮಾತ್ರವಲ್ಲದೇ ಕುಡಿಯುವ ನೀರು, ಜಾನುವಾರುಗಳಿಗೆ ನೀರು, ಮೇವಿಗೂ ಕೊರತೆ ಉಂಟಾಗಿದೆ. ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಂತೂ ತೀವ್ರ ಮಳೆ ಕೊರತೆ ಉಂಟಾಗಿ ಬೆಳೆಗಳು ಒಣಗಿ ಹೋಗಿವೆ. ರೈತರು ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಿದೆ. ಹವಾಮಾನ ತಜ್ಞರ ಸಲಹೆ ಮೇರೆಗೆ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಶೀಘ್ರವಾಗಿ ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೈಗೊಂಡು ಮಳೆ ಕೊರತೆ ನೀಗಿಸಬೇಕು ಎಂದು ಕೋನರಡ್ಡಿ ಮನವಿ ಮಾಡಿದ್ದಾರೆ.

ಇನ್ನು, ಹಾವೇರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಜು. 7ರಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದು, ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಸಹ ಒಪ್ಪಿಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.